ಮಂಗಳೂರು: ನಿವೇಶನರಹಿತರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ

Update: 2017-04-24 08:45 GMT

ಮಂಗಳೂರು, ಎ.24: ನಿವೇಶನರಹಿತರಿಗೆ ಭೂಮಿ ಮಂಜೂರು ಮಾಡುವವರೆಗೆ ಅನಿರ್ಧಿಷ್ಟಾವಧಿ ಚಳವಳಿ ಮುಂದುವರಿಯಲಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

 ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಎದುರು ನಿವೇಶನರಹಿತರ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡ ಅನಿರ್ಧಿಷ್ಟಾವಧಿಯ ಚಳವಳಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನಿವೇಶನರಹಿತ ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಆರ್ಥಿಕವಾಗಿ ಬಲಾಢ್ಯರನ್ನು, ಭೂಮಿ ಉಳ್ಳವರನ್ನು, ಮನೆ ಮಾಲಕರನ್ನು, 50,000 ರೂ.ಗೂ ಅಧಿಕ ಆದಾಯವಿರುವವರನ್ನು ನಿವೇಶನರಹಿತರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ರೀತಿಯ ದೋಷಪೂರಿತವಾದ ನಿವೇಶನರಹಿತರ ಪಟ್ಟಿಯನ್ನು ರಚಿಸಿರುವುದರಿಂದ ಹಲವಾರು ನೈಜ ಫಲಾನುಭವಿಗಳಾಗಬೇಕಾದವರಿಗೆ ಅನ್ಯಾಯವಾಗಿದೆ. ಅಂಗವಿಕಲರು, ವಿಧವೆಯರು, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗದ ಜನರು ಅವಕಾಶದಿಂದ ವಂಚಿತರಾಗಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ನೀಡಿರುವ ಭರವಸೆಯಂತೆ ಶಕ್ತಿನಗರ, ಇಡ್ಯಾ ಸುರತ್ಕಲ್‌ನಲ್ಲಿ ಮನೆ ನಿರ್ಮಿಸುವ ದಿನಾಂಕವನ್ನು ಲಿಖಿತವಾಗಿ ನೀಡಬೇಕು. ಕಣ್ಣೂರಿನ ಕಣ್ಣಗುಡ್ಡೆಯಲ್ಲಿ 11.25 ಎಕ್ರೆ ಜಾಗಕ್ಕೆ ಅರ್ಹ ನಿವೇಶನರಹಿತರನ್ನು ತಕ್ಷಣ ಆಯ್ಕೆ ಮಾಡಬೇಕು. ನಿವೇಶನರಹಿತರ ಹೋರಾಟ ಸಮಿತಿಯ ಜೊತೆ ದ್ವಿಪಕ್ಷೀಯ ಸಭೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ.ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಗುವುದು.ಮನೆ ಇಲ್ಲದವರಿಗೆ ನಿವೇಶನ ನೀಡಬೇಕಾಗಿರುವುದು ಸರಕಾರದ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಭರವಸೆ ನೀಡಿದ ಜನಪ್ರತಿನಿಧಿಗಳು ಅದನ್ನು ಮರೆತು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಹೋರಾಟಗಾರುರ ಒತ್ತಾಯಿಸಿದರು.

ಧರಣಿಯಲ್ಲಿ ಸಿಪಿಎಂ ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿ ನಗರ, ಖಜಾಂಚಿ ಪ್ರಭಾವತಿ ಬೋಳೂರು, ಸಾದಿಕ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News