ರೈತರ ಸಾಲ ವಸೂಲಾತಿ ತಡೆಗೆ ಆದೇಶ ನೀಡಿ: ರೈತಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

Update: 2017-04-24 10:10 GMT

ಪುತ್ತೂರು, ಎ.24: ಕಳೆದ 3 ವರ್ಷಗಳಿಂದ ನೀರಿಲ್ಲದೆ ಜಿಲ್ಲೆಯ ರೈತರು ಕಂಗಾಲಾಗಿದ್ದು, ಸರ್ಕಾರವೂ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಇಲ್ಲಿನ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲ ವಸೂಲಾತಿಗಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ರೈತರ ಹಿತದೃಷ್ಟಿಯಿಂದ ರೈತರ ಸಾಲ ವಸೂಲಾತಿಗೆ ಮುಂದಾಗದಂತೆ ಜಿಲ್ಲಾಧಿಕಾರಿ ಆದೇಶ ನೀಡಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ನೀರಿಲ್ಲದೆ ಜಿಲ್ಲೆಯ ರೈತರು ಕಂಗಾಲಾಗಿದ್ದು, ಕೃಷಿಯಲ್ಲಿ ತೀರಾ ನಷ್ಟ ಅನುಭವಿಸುತ್ತಿದ್ದಾರೆ. ಇದೇ ವೇಳೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಸಾಲಗಾರ ರೈತರಿಗೆ ಮತ್ತು ಜಾಮೀನುದಾರರಿಗೆ ಸಾಲ ಮರು ಪಾವತಿಸುವಂತೆ ಕೋರ್ಟು ದಾವೆ ದಾಖಸಿ, ರಿಜಿಸ್ಟ್ರಿ ನೋಟಿಸ್ ನೀಡಿ ಮಾನಸಿಕ ಕಿರುಕುಳ ನೀಡುತ್ತಿದೆ. ಸರ್ಕಾರವು ಸಾಲ ವಸೂಲು ಮಾಡದಂತೆ ನೀಡಿರುವ ಆದೇಶಕ್ಕೆ ಕಿಂಚಿತ್ತೂ ಬೆಲೆ ನೀಡದ ಬ್ಯಾಂಕ್ ಮತ್ತು ಸಂಸ್ಥೆಗಳು ಬೆದರಿಕೆ, ದಬ್ಬಾಳಿಕೆ ನಡೆಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಸಾಲ ವಸೂಲಾತಿಗೆ ಮುಂದಾಗದಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಬೇಕು. ತಪ್ಪಿದಲ್ಲಿ ಸಂಬಂಧಿಸಿದ ಬ್ಯಾಂಕ್ ಮತ್ತು ಸಂಸ್ಥೆಗಳ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ‘ರೈತರ ಆತ್ಮಹತ್ಯೆ ಪ್ರಚೋದನೆ’ ಎಂಬುದಾಗಿ ಉಚ್ಚ ನ್ಯಾಯಾಲಯದಲ್ಲಿ ವೈಯಕ್ತಿಕ ದಾವೆ ಹೂಡಲಾಗುವುದು ಎಂದು ಅವರು ಮನವಿಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News