ಆದಿವಾಸಿಗಳ ಹಕ್ಕುಗಳ ಸಂರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಅನಿವಾರ್ಯ: ಗುರುಶಾಂತ್

Update: 2017-04-24 10:52 GMT

ಬೆಳ್ತಂಗಡಿ, ಎ.24: ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಾಕರಿಸುವ ಮೂಲಕ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಆದಿವಾಸಿಗಳ ಹಕ್ಕುಗಳ ಸಂರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅನಿವಾರ್ಯತೆ ಇದೆ ಎಂದು ಆದಿವಾಸಿ ಅಧಿಕಾರ್ ರಾಷ್ಟೀಯ ಮಂಚ್ ನ ರಾಷ್ಟ್ರೀಯ ಸಮಿತಿ ಸದಸ್ಯ ಎಸ್. ವೈ.ಗುರುಶಾಂತ್ ಹೇಳಿದ್ದಾರೆ.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ "ಆದಿವಾಸಿ ಸಮುದಾಯದ ಬದುಕು ಮತ್ತು ಅರಣ್ಯ ಹಕ್ಕುಗಳ ಕಾಯ್ದೆ ಜಾರಿ ಒಂದು ದಶಕದ ಅನುಭವ" ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆದಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿರುವ ಅರಣ್ಯ ಹಕ್ಕು ಕಾಯ್ದೆಗೆ ಒಂದು ದಶಕ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆದಿವಾಸಿಗಳ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಅರಣ್ಯ ಹಕ್ಕು ಕಾಯ್ದೆಯಡಿ 43 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲಿ 17 ಲಕ್ಷ ಪರಿಶೀಲನೆಗೆ ಪುರಸ್ಕಾರಗೊಂಡಿದ್ದು, 26 ಲಕ್ಷ ಅರ್ಜಿಗಳನ್ನು ತಿರಸ್ಕಾರಗೊಳಿಸಲಾಗಿದೆ. ಕರ್ನಾಟಕದಲ್ಲಿ 2.26 ಲಕ್ಷ ಅರ್ಜಿಗಳ ಪೈಕಿ ಕೇವಲ 16 ಸಾವಿರ ಪರಿಶೀಲನೆಯಾಗಿ 7,356 ಅರ್ಜಿಗಳಿಗೆ ಜಮೀನಿನ ಹಕ್ಕುಪತ್ರ ನೀಡಲಾಗಿದೆ. 2.2 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವಿವರಿಸಿದರು.

ಪಶ್ಚಿಮ ಘಟ್ಟಗಳನ್ನು ಬಹುರಾಷ್ಟ್ರೀಯ ಕಂಪೆನಿಗಳ ನೀಡಲಾಗುತ್ತದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಆನೆ ಕಾರಿಡಾರ್, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಜಾರಿಗಾಗಿ ಪ್ರಯತ್ನ ನಡೆಸುವ ನಮ್ಮನಾಳುವ ಸರ್ಕಾರಗಳು ಅರಣ್ಯ ಹಕ್ಕು ಕಾಯ್ದೆ ಜಾರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದ ಅವರು, ಅರಣ್ಯ ಹಕ್ಕು ಕಾಯ್ದೆ ಜಾರಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನಮ್ಮ ವ್ಯವಸ್ಥೆಯ ದುರಂತ. ಅರಣ್ಯ ಹಕ್ಕು ಕಾಯ್ದೆ ಜ್ಯಾರಿಗೆ ಸರ್ಕಾರಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲವಾಗಿದೆ ಎಂದರು.

ಇರುಳಿಗರು ಕ್ಷೇಮಾಭಿವೃದ್ಧಿ ಸಂಘದ ರಾಮನಗರ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಮೂಲಕ ಹೋರಾಟ ನಡೆಸಬೇಕಾಗಿದೆ. ನಮ್ಮ ಪರವಾದ ಕಾಯ್ದೆಯನ್ನು ಅಧಿಕಾರಿಗಳ ಮೂಲಕ ಜಾರಿ ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಸಂಘಟನೆ ಮೂಲಕ ಹೋರಾಟ ನಡೆಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ವಸಂತ ನಡ ವಹಿಸಿದ್ದರು.

ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕರ್ನಾಟಕ ರಾಜ್ಯ ಸಂಚಾಲಕ ವೈ.ಕೆ.ಗಣೇಶ್, ರಾಜ್ಯ ಸಹ ಸಂಚಾಲಕರಾದ ವಿಠ್ಠಲ ಮಲೆಕುಡಿಯ, ರಾಜ್ಯ ಸಮಿತಿಯ ಸದಸ್ಯರಾದ ಶ್ರೀಧರ ಕೊರಗ ನಾಡ ಕುಂದಾಪುರ, ಶೇಖರ್ ಎಲ್., ರವಿ ಬರಡಿ ಸಿಪಿಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ., ಇರುಳಿಗರ ಕ್ಷೇಮಾಭಿವೃದ್ಧಿ ಸಂಘದ ರಾಮನಗರ ಜಿಲ್ಲಾ ಗೌರವಾಧ್ಯಕ್ಷ ಮಹದೇವಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News