ಪುತ್ತೂರು: ಪತ್ನಿಯನ್ನು ಹೊಡೆದು ಕೊಂದ ಪತಿಗೆ ಜೀವಾವಧಿ ಶಿಕ್ಷೆ

Update: 2017-04-24 13:53 GMT

ಪುತ್ತೂರು, ಎ.24: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆಗೈದಿದ್ದ ಪತಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಸುರೇಶ್ ಮುಗೇರ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ.

2014ರ ನ.10ರಂದು ಊಟ ಚೆನ್ನಾಗಿ ಮಾಡಿಲ್ಲ ಎಂಬ ಸಿಟ್ಟಿನಿಂದ ಪತ್ನಿ ಲಕ್ಷೀ ಮೇಲೆ ಹಲ್ಲೆ ನಡೆಸಿದ್ದ ಸುರೇಶ್ ಆಕೆಯನ್ನು ಕೊಲೆಗೈದಿದ್ದ. ನಂತರ ಶವವನ್ನು ಬಾವಿಗೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ. ಪ್ರಕರಣ ನಡೆದ 9 ವರ್ಷಗಳ ಹಿಂದೆ ಸುರೇಶ್ ಮತ್ತು ಲಕ್ಷ್ಮೀ ಮದುವೆಯಾಗಿತ್ತು. ಲಕ್ಷ್ಮೀ  ಮೂಲತಃ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ನಿವಾಸಿ. ಮದುವೆಯಾದ ನಂತರ ಆಗಾಗ ಸುರೇಶ್ ಪತ್ನಿಗೆ ಕಿರುಕುಳ, ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಊಟ ಚೆನ್ನಾಗಿಲ್ಲ ಎನ್ನುವ ಕ್ಷುಲ್ಲಕ ಕಾರಣದಿಂದ ಅಪರಾಧಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಆಗ ಲಕ್ಷ್ಮೀ ತಪ್ಪಿಸಿಕೊಳ್ಳಲು ಓಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಈತ ಪತ್ನಿಯನ್ನು ಬೆನ್ನಟ್ಟಿದ್ದ. ಸ್ಥಳೀಯ ಅಣಿಯೂರು ಯಾನೆ ತನಿಯಾರು ಎಂಬವರ ಜಮೀನಿಗೆ ತಲುಪಿದಾಗ ಪತ್ನಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಾಯಗೊಂಡ ಲಕ್ಷ್ಮೀ ಅಲ್ಲಿಯೇ ಮೃತಪಟ್ಟಿದ್ದರು. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸುರೇಶ್ ತನ್ನ ಪತ್ನಿ ಶವವನ್ನು ಪಕ್ಕದಲ್ಲಿದ್ದ ಬಾವಿಗೆ ಹಾಕಿದ್ದಾನೆ ಎಂದು ಆಪಾದಿಸಲಾಗಿದೆ.

ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮರುದಿನ ಸುರೇಶ್ ಸುದ್ದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಶವ ಬಾವಿಯಲ್ಲಿ ಸಿಕ್ಕಿತ್ತು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅದೇ ದಿನ ಕಡಬ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ದೇರಳಕಟ್ಟೆ ಪೊರೆನ್ಸಿಕ್ ಲ್ಯಾಬ್‌ನಲ್ಲಿ ಮರಣೋತ್ತರ ಶವ ಪರೀಕ್ಷೆಯ ಅಧ್ಯಯನ ನಡೆದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಮೃತ ಲಕ್ಷ್ಮೀಯವರ ತಲೆ ಭಾಗಕ್ಕೆ ಬಲವಾದ ಹಲ್ಲೆ ನಡೆದಿರುವ ವಿಚಾರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು.

2014ರ ನ.13ರಂದು ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ವರದಿ ಬಂದಿತ್ತು. ಇದೇ ಅಂಶ ಮುಂದಿಟ್ಟು ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದ ಮಂಡನೆ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News