ರಸ್ತೆಬದಿ, ಬೈಕ್-ತಲವಾರುಗಳು ಪತ್ತೆ: ಜಲೀಲ್ ಹತ್ಯೆಯ ಹಾದಿ ತಪ್ಪಿಸುವ ಕೃತ್ಯದ ಶಂಕೆ

Update: 2017-04-24 14:33 GMT

ಬಂಟ್ವಾಳ, ಎ. 24: ಕರೋಪಾಡಿ ಗ್ರಾಮದ ಮಿತ್ತನಡ್ಕ ಮುಗುಳಿ ರಸ್ತೆಯ ಬದಿಯಲ್ಲಿ ಸೋಮವಾರ ಎರಡು ಬೈಕ್, ಎರಡು ತಲವಾರು, ಬಟ್ಟೆಬರೆ ಪತ್ತೆಯಾಗಿದ್ದು ಇದು ವಿಟ್ಲ ಪರಿಸರದಲ್ಲಿ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪತ್ತೆಯಾದ ವಸ್ತುಗಳು ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆಗೆ ಬಳಸಿದ್ದಾಗಿದೆ ಎಂದು ಪರಿಸರದ ಕೆಲವರು ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದರೆ, ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಹಂತಕರ ತಂಡ ಈ ತಂತ್ರ ರೂಪಿಸಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ-ಕೇರಳ ಗಡಿಭಾಗದ ಮುಗುಳಿ ಎಂಬಲ್ಲಿಯ ಉಪ್ಪಳ ರಸ್ತೆ ಬದಿಯಲ್ಲಿ ಇಂದು ಬೆಳಗ್ಗೆ ಸ್ಥಳೀಯರು ನಡೆದು ಹೋಗುತ್ತಿದ್ದ ವೇಳೆ ಹಳೆಯ ಎರಡು ಪಲ್ಸರ್ ಬೈಕ್‌ಗಳು ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಬೈಕ್ ಪಕ್ಕದಲ್ಲಿ ಎರಡು ತಲವಾರು ಹಾಗೂ ನಾಲ್ಕು ಜೋಡಿ ಪ್ಯಾಂಟ್ ಹಾಗೂ ಶರ್ಟ್‌ಗಳು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ವಸ್ತುಗಳನ್ನು ವಶಕ್ಕೆ ಪಡೆದು ಜಲೀಲ್ ಕೊಲೆಗೆ ಸಂಬಂಧಿಸಿದ ವಸ್ತುಗಳೇ ಎಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಜಲೀಲ್ ಹತಂಕರು ಹೊಸ ಎಫ್ ಝಡ್ ಮಿಲಿಟರಿ ಬೈಕ್ ಹಾಗೂ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದರು. ಆದರೆ ಇಂದು ಮುಗುಳಿಯಲ್ಲಿ ಪತ್ತೆಯಾದ ಬೈಕ್‌ಗಳು ಹಳೆಯ ಪಲ್ಸರ್ ಬೈಕ್‌ಗಳಾಗಿದೆ. ಬೈಕ್‌ಗಳು ಪತ್ತೆಯಾದ ಸ್ಥಳ ರಸ್ತೆಯ ಬದಿಯಾಗಿರುವುದರಿಂದ ಹತ್ಯೆ ನಡೆದ ಬಳಿಕ ಹಂತಕರು ಬೈಕ್‌ಗಳನ್ನು ಇಲ್ಲಿ ಬಿಟ್ಟು ಹೋಗಿದ್ದರೆ ಹತ್ಯೆಯಾದ ದಿನ ಅಥವಾ ಮರುದಿನ ಸ್ಥಳೀಯರಿಗೆ ಕಾಣಿಸಬೇಕಿತ್ತು. ಹತ್ಯೆ ನಡೆಸಿದವರೇ ಬೈಕ್‌ಗಳನ್ನು ಇಲ್ಲಿ ಬಿಟ್ಟು ಹೋಗಿದ್ದರೆ ಬೈಕ್‌ಗಳು ದೂರ ದೂರ ಬಿದ್ದಿರಬೇಕಿತ್ತು. ಪತ್ತೆಯಾದ ಬೈಕ್‌ಗಳು ಒಂದಕ್ಕೊಂದು ತಾಗಿಕೊಂಡು ಒಂದೇ ಕಡೆಗೆ ಮುಖ ಮಾಡಿ ನೆಲಕ್ಕೆ ಬಿದ್ದ ರೀತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸ್ಥಳದಲ್ಲಿದ್ದ ತಲವಾರ್‌ನಲ್ಲಿ ರಕ್ತದ ಕಲೆಗಳು ಇಲ್ಲ. ಸ್ಥಳದಲ್ಲಿ ಪತ್ತೆಯಾದ ಬಟ್ಟೆಬರೆಗಳು ಕೂಡಾ ಅವಸರದಲ್ಲಿ ಎಸೆದ ಹಾಗೆ ಇರದೆ, ಎಲ್ಲಿಂದಲೋ ತಂದಿರಿಸಿರುವ ರೀತಿಯಲ್ಲಿವೆ. ಇವೆಲ್ಲವನ್ನು ಪರಿಶೀಲನೆ ನಡೆಸಿರುವ ಪೊಲೀಸರು ಜಲೀಲ್ ಕೊಲೆ ಪ್ರಕರಣದ ದಾರಿ ತಪ್ಪಿಸಲು ಹಂತಕರು ಹೂಡಿರುವ ತಂತ್ರ ಇದಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಗುಳಿಯಲ್ಲಿ ಪತ್ತೆಯಾದ ಎರಡು ಬೈಕ್‌ಗಳ ಪೈಕಿ ಕೆಂಪು ಬಣ್ಣದ ಒಂದು ಬೈಕ್ ಕನ್ಯಾನ ನಿವಾಸಿಯೊಬ್ಬರಿಗೆ ಸೇರಿದಾಗಿದ್ದು ಹತ್ತು ದಿನಗಳ ಹಿಂದೆ ಅದು ಕಳವಾಗಿತ್ತು. ಬೈಕ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಕನ್ಯಾನದ ಸಾರ್ವಜನಿಕರ ಶೌಚಾಲಯ ಸಮೀಪ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಲಾಗಿತ್ತು.
ಮುಗುಳಿಯಲ್ಲಿ ಪತ್ತೆಯಾದ ವಸ್ತುಗಳನ್ನು ವಶಕ್ಕೆ ಪಡೆದಿರುವ ವಿಟ್ಲ ಠಾಣೆ ಪೊಲೀಸರು ಅನಾಥ ವಸ್ತುಗಳು ಪತ್ತೆ ಕಾಲಂ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮೂವರು ವಶಕ್ಕೆ?: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಚಿಸಿರುವ ವಿಶೇಷ ತನಿಖಾ ತಂಡ ಮೂವರನ್ನು ವಶಕ್ಕೆ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಡುಹಗಲೇ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಜಲೀಲ್‌ರನ್ನು ಹತ್ಯೆಗೈದಿರುವ ಘಟನೆ ಪೊಲೀಸರ ನಿದ್ದೆಗೆಡಿಸಿತ್ತು. ಕೊಲೆಗಾರರನ್ನು ಪತ್ತೆಹಚ್ಚಲು ಐದು ವಿಶೇಷ ತಂಡವನ್ನು ರಚಿಸಲಾಗಿದ್ದು ಈ ತಂಡ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ ಆರೋಪಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಯಾವುದೇ ಪೊಲೀಸರು ಖಚಿತಪಡಿಸಿಲ್ಲ. ಜಲೀಲ್ ಕೊಲೆಗೆ ಸಂಬಂಧಿಸಿ ಇನ್ನು ಎರಡು ದಿನದಲ್ಲಿ ಎಲ್ಲ ವಿಚಾರ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪೊಲೀಸರೊಬ್ಬರು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News