ಭೀತಿ ರಾಜಕೀಯದ ವಿರುದ್ಧ ಒಗ್ಗಟ್ಟಾಗಬೇಕಾದ ಅನಿವಾರ್ಯತೆಯಿದೆ:ಎ.ಸಯೀದ್

Update: 2017-04-24 14:41 GMT

ಉಳ್ಳಾಲ, ಎ.24: ದೇಶದೆಲ್ಲಡೆ ಭೀತಿ ರಾಜಕೀಯ ತಾಂಡವವಾಡುತ್ತಿದೆ. ದೇಶದಲ್ಲಿರುವ ಕೆಲವು ಕಾನೂನುಗಳು ಮುಸ್ಲಿಮರು, ಆದಿವಾಸಿಗಳು, ದಲಿತರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಇಂತಹ ಭಯದ ವಾತಾವರಣವನ್ನು ಮಟ್ಟಹಾಕಲು ದೇಶದ ಶಾಂತಿಪ್ರಿಯ ಪ್ರಜೆಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಹೇಳಿದರು.

ಎಸ್‌ಡಿಪಿಐ ವತಿಯಿಂದ ಉಳ್ಳಾಲದ ಹಝ್ರತ್ ಶಾಲಾ ಮೈದಾನದ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ "ಭೀತಿ ರಾಜಕೀಯದ ವಿರುದ್ಧ ಐಕ್ಯಗೊಳ್ಳೋಣ" ಅಭಿಯಾನದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೋಮುವಾದಿ ಪಡೆ ಪ್ರಗತಿಪರ ಚಿಂತಕರನ್ನು, ಮಾನವ ಹಕ್ಕು ಹೋರಾಟಗಾರರನ್ನು ಬಿಡದೆ ಹಿಂಸಿಸುತ್ತಿದೆ. ಪ್ರಗತಿಪರ ಚಿಂತಕರಾದ ಗೋವಿಂದ ಪನ್ಸಾರೆ, ಧಾಬೋಲ್ಕರ್, ಎಂ.ಎಂ. ಕಲ್ಬುರ್ಗಿ ಅವರನ್ನು ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಪೊಲೀಸ್ ದೌರ್ಜನ್ಯ ವ್ಯಾಪಕವಾಗಿ ನಡೆಯುತ್ತಿದೆ. ದೇಶವನ್ನೇ ಅಭದ್ರತೆಗೆ ತಂದಿರುವ ಅದೆಷ್ಟೋ ಪ್ರಕರಣಗಳು ಇದ್ದರೂ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬೇಕಿದ್ದ ಜಾತ್ಯತೀತ ಪಕ್ಷಗಳು ಮೌನವಹಿಸಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ಮನದಲ್ಲಿ ಭೀತಿ ಹಾಗೂ ಅಭದ್ರತೆ ಹೆಚ್ಚಿದೆ. ಹತ್ಯೆ, ಪ್ರತೀಕಾರ, ಕೊಲೆ, ಧ್ವಂಸ, ಸಾಮರಸ್ಯ ಕದಡುವಂತಹ ಕಾರ್ಯಗಳು ಕಾನೂನಿನ ಯಾವುದೇ ಭಯವಿಲ್ಲದೆ ಎಗ್ಗಿಲ್ಲದೆ ಸಾಗುತ್ತಿದೆ. ದುಷ್ಕರ್ಮಿಗಳ ಅಟ್ಟಹಾಸ ತಾರಕಕ್ಕೆ ಏರಿದ್ದರೂ ಕೇಂದ್ರ ಸರಕಾರ ಮೌನ ವಹಿಸಿರುವುದು ದುಷ್ಕರ್ಮಿಗಳಿಗೆ ಹೆಚ್ಚಿನ ಬಲ ತಂದಿದೆ ಎಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್, ರಾಜ್ಯ ಕಾರ್ಯದರ್ಶಿ ಇಲ್ಯಾಸ್ ಫರಂಗಿಪೇಟೆ, ಅಲ್ಪೋನ್ಸ್ ಫ್ರಾಂಕೋ, ಅಕ್ರಮ್ ಹಸನ್ ಮಾತನಾಡಿದರು. 

ರಾಜ್ಯ ಸಮಿತಿ ಸದಸ್ಯ ಕೂಸಪ್ಪ, ಮಜೀದ್ ಖಾನ್, ಸಿದ್ದಿಕ್ ಪುತ್ತೂರು, ಅಬ್ಬಾಸ್ ಕಿನ್ಯ, ನಾಸಿರ್ ಸಜಿಪ, ಅಯಾಝ್ ಕೃಷ್ಣಾಪುರ, ಇಕ್ಬಾಲ್ ಐ.ಎಂ.ಆರ್, ಹಾರಿಸ್ ಮಲಾರ್, ನವಾಝ್ ಉಳ್ಳಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಅತ್ತಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು. ಅಶ್ರಫ್ ಮಂಚಿ ವಂದಿಸಿದರು. ಇಕ್ಬಾಲ್ ಬೆಳ್ಳಾರೆ ಹಾಗೂ ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ತೊಕ್ಕೊಟ್ಟಿನಿಂದ ಉಳ್ಳಾಲ ಪೇಟೆಯ ತನಕ ಜಾಥಾ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News