ಬಡ ಕುಟುಂಬಗಳಿಗೆ ಶೀಘ್ರದಲ್ಲೇ ‘ಅಡುಗೆ ಅನಿಲ ಭಾಗ್ಯ’: ಸಚಿವ ಖಾದರ್

Update: 2017-04-24 15:32 GMT

ಮಂಗಳೂರು, ಎ. 24: ರಾಜ್ಯ ಸರಕಾರದಿಂದ ಬಡ ಕುಟುಂಬಗಳಿಗೆ ಶೀಘ್ರದಲ್ಲೇ ‘ಅಡುಗೆ ಅನಿಲ ಭಾಗ್ಯ’ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಯನ್ವಯ ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಮತ್ತು ಸ್ಟೌ ಒದಗಿಸಲಾಗುವುದು. ಮೇ ತಿಂಗಳಿನಿಂದಲೇ ಇದರ ಪ್ರಕ್ರಿಯೆ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ನಗರದ ಸಕ್ಯೂರ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ಬಡ ಕುಟುಂಬಕ್ಕೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಪ್ರಕಟಿಸಿತ್ತಾದರೂ ರಾಜ್ಯದಲ್ಲಿ ಆ ಯೋಜನೆ ಇನ್ನೂ ಜಾರಿಯಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಮೂರು ಬಾರಿ ಕೇಂದ್ರಕ್ಕೆ ಪತ್ರವನ್ನೂ ಬರೆದಿತ್ತು. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ನೀಡಿದರೆ ರಾಜ್ಯದ ವತಿಯಿಂದ ಸ್ಟೌ ಉಚಿತವಾಗಿ ನೀಡುವುದಾಗಿಯೂ ಘೋಷಿಸಲಾಗಿತ್ತು. ಆದರೆ ಕೇಂದ್ರ ಸರಕಾರದಿಂದ ಈ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಇದೀಗ ರಾಜ್ಯ ಸರಕಾರದ ವತಿಯಿಂದಲೇ ಅಡುಗೆ ಅನಿಲ ಭಾಗ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ಖಾದರ್ ಹೇಳಿದರು.

ಈಗಾಗಲೇ ಕೇಂದ್ರದ ಉಜ್ವಲ ಯೋಜನೆಯಡಿ ಅರ್ಜಿ ಸಲ್ಲಿಸಿದವರನ್ನು ಹೊರತುಪಡಿಸಿ, ಉಳಿದವರ ಪಟ್ಟಿ ತಯಾರಿಸಿ, ಅವರಿಂದ ಅರ್ಜಿ ಪಡೆದುಕೊಳ್ಳಲಾಗುವುದು. ಈ ಪ್ರಕ್ರಿಯೆ ಮೇ ತಿಂಗಳಿನಿಂದಲೇ ಆರಂಭವಾಗಲಿದೆ. ಅನಿಲ ಭಾಗ್ಯ ಯೋಜನೆಯಡಿ ಬಡ ಕುಟುಂಬಕ್ಕೆ ವಿತರಣೆಯಾಗುವ ಅಡುಗೆ ಅನಿಲ ಮತ್ತು ಸ್ಟೌಗೆ 1,900 ರೂ. ತಗಲಲಿದ್ದು, ಇದನ್ನು ಸರಕಾರದ ವತಿಯಿಂದಲೇ ಭರಿಸಲಾಗುವುದು. ಈ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದ್ದು, ಎಷ್ಟು ಆರ್ಥಿಕ ಹೊರೆಯಾಗುತ್ತದೆ ಎನ್ನುವುದು ಇನ್ನಷ್ಟೇ ಅಂದಾಜಿಸಬೇಕಿದೆ ಎಂದವರು ಮಾಹಿತಿ ನೀಡಿದರು.

ಖುರೇಷಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಕೆ.ಅಶ್ರಫ್ ಅವರು ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಕೆಪಿಸಿಸಿ ತೀರ್ಮಾನ ತೆಗೆದುಕೊಳ್ಳಲಿದೆ. ಜಿಲ್ಲಾ ಕಾಂಗ್ರೆಸ್ ಈ ಬಗ್ಗೆ ಕೆಪಿಸಿಸಿಗೆ ವರದಿ ನೀಡಲಿದೆ ಎಂದರು.

ಮೇ 3ರಿಂದ ಪಡಿತರ ಚೀಟಿ ವಿತರಣೆ
ಮೇ ತಿಂಗಳ 3ರಿಂದಲೇ ಪಡಿತರ ಚೀಟಿಗಳ ಪರಿಶೀಲನೆ ಮತ್ತು ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪಡಿತರ ಚೀಟಿಯನ್ನು ನೇರವಾಗಿ ಅವರ ಮನೆಗೇ ಕಳುಹಿಸುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಹೊಸ ಪಡಿತರ ಚೀಟಿಗಾಗಿ 10 ಲಕ್ಷ ಮಂದಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿ ತುಸು ಗೊಂದಲ ಏರ್ಪಟ್ಟಿದ್ದರಿಂದ 2 ತಿಂಗಳು ವಿಳಂಬವಾಗಿದೆ. ಪಡಿತರ ಚೀಟಿ ಬಾರದೆ ಇರುವುದರಿಂದ ಅರ್ಜಿದಾರರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.

ಈಗ ಹೊಸ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಬಂದ ಅರ್ಜಿಗಳನ್ನು ಮೇ 3ರಿಂದ ಹೊಸ ಸಾಫ್ಟ್‌ವೇರ್ ಮೂಲಕ ಕಂದಾಯ ಇಲಾಖೆಗೆ ಕಳುಹಿಸಿ ಕೊಡಲಾಗುವುದು. ಅವರು ಪರಿಶೀಲಿಸಿದ ಬಳಿಕ ಅದನ್ನು ಮತ್ತೆ ಅವರು ಆಹಾರ ಇಲಾಖೆಗೆ ವಾಪಸ್ ಕಳುಹಿಸಬೇಕು. ಅದಾದ ಕೂಡಲೆ ಪಡಿತರ ಚೀಟಿಗಳ ಪ್ರಿಂಟಿಂಗ್ ಕೆಲಸ ಆರಂಭಿಸಿ, ನೇರವಾಗಿ ಅರ್ಜಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಖಾದರ್ ಹೇಳಿದರು.

ಪಿಡಿಒ ವಿರುದ್ಧ ಕ್ರಮದ ಎಚ್ಚರಿಕೆ

ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್ ಮೂಲಕ ಬರುವ ಅರ್ಜಿಗಳನ್ನು ಗ್ರಾ.ಪಂ. ಪಿಡಿಒಗಳು ಸ್ವೀಕರಿಸಬೇಕು. ಇಲ್ಲದಿದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಸಚಿವ ಯು.ಟಿ.ಖಾದರ್ ಅವರು, ಸ್ವೀಕರಿಸದೇ ಇದ್ದರೆ ಸ್ವೀಕರಿಸದಿರಲು ಕಾರಣವೇನೆಂಬುದನ್ನು ಲಿಖಿತವಾಗಿ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ತೊರೆಯುವುದಿಲ್ಲ

"ನನ್ನ ಸಹೋದರ ಇಫ್ತಿಕರ್ ಅಲಿ ಬಿಜೆಪಿ ಸೇರ್ಪಡೆಯಾಗುತ್ತಾರೆಂಬುದು ಕೇವಲ ವದಂತಿ. ನಮ್ಮ ಕುಟುಂಬ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ನಮಗೆ ರಾಜಕೀಯಕ್ಕಿಂತಲೂ ತಂದೆ-ತಾಯಿಯ ಹೆಸರು ಉಳಿಸುವುದು ಮುಖ್ಯ. ಅವರ ಹೆಸರಿಗೆ ಕಳಂಕ ತರುವ ಕೆಲಸ ನಾವು ಮಾಡುವುದಿಲ್ಲ. ನನ್ನ ತಂದೆಯವರು ಸಮಾಜದಲ್ಲಿ ಗುರುತಿಸಿಕೊಂಡಿದ್ದೇ ಕಾಂಗ್ರೆಸ್ ಪಕ್ಷದ ಮೂಲಕ. ಹಾಗಾಗಿ ಕುಟುಂಬದ ಯಾವ ಸದಸ್ಯನೂ ಕಾಂಗ್ರೆಸ್ ತೊರೆಯುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಮುಡಾ ಸದಸ್ಯ ಮುರಳಿ, ಮಾಜಿ ಜಿ.ಪಂ. ಸದಸ್ಯ ಎನ್.ಎಸ್.ಕರೀಂ, ಮಾಜಿ ತಾ.ಪಂ. ಸದಸ್ಯ ಮುಸ್ತಫಾ, ಕಿನ್ಯಾ ಗ್ರಾ ಪಂ ಉಪಾಧ್ಯಕ್ಷ ಸಿರಾಜ್, ಮೆಲ್ವಿನ್ ಡಿಸೋಜ, ರಫೀಕ್, ದಿನೇಶ್ ರೈ, ದೀಪಕ್ ಪೂಜಾರಿ, ಗೋಪಾಲ ಶೆಟ್ಟಿ, ಪಿಯೂಸ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News