ನಿರುಪಯುಕ್ತ ಕೊಳವೆ ಬಾವಿ ಮುಚ್ಚದಿದ್ದರೆ ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲಾಧಿಕಾರಿ

Update: 2017-04-24 15:22 GMT

ಉಡುಪಿ, ಎ.24: ಜಿಲ್ಲೆಯಲ್ಲಿರುವ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚದೆ, ಇದರಿಂದ ಯಾವುದೇ ಜೀವಹಾನಿ ಸಂಭವಿಸಿದರೆ ಅದಕ್ಕೆ ಸಂಬಂಧ ಪಟ್ಟವರ ವಿರುದ್ಧ ಜಿಲ್ಲಾಡಳಿತ ವತಿಯಿಂದಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜರುಗಿದ ಉಡುಪಿ ಜಿಪಂನ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 

ಜಿಲ್ಲೆಯಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಜಾಗದಲ್ಲಿರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ನಿರುಪಯುಕ್ತ ಕೊಳವೆ ಬಾವಿಗಳ ಕುರಿತ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿ ರುವುದರಿಂದ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದರು. ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚುವುದು ಆ ಜಮೀನಿನ ಹಾಗೂ ಬೋರ್‌ವೆಲ್ ಕಂಪೆನಿಯ ಆದ್ಯ ಕರ್ತವ್ಯ ಎಂದವರು ತಿಳಿಸಿದರು.

ಜಿಲ್ಲೆಯ ಎಂಟು ಕಡೆಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರು ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಘಟಕ ಪ್ರಾರಂಭಕ್ಕೆ ಮುಂಚೆ ಮತ್ತು ಅನಂತರ ಆ ಪ್ರದೇಶದ ಜನರ ಆರೋಗ್ಯ ಸುಧಾರಣೆಯ ಕುರಿತು ವರದಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಿಯಾಂಕಾ ಸೂಚಿಸಿದರು.

ಪ್ರಸಕ್ತ ಆರ್ಥಿಕ ವರ್ಷದಿಂದ ಎಲ್ಲಾ ಇಲಾಖೆಗಳು ತಮ್ಮ ಕಚೇರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಗವರ್ನಮೆಂಟ್ ಇ-ಮಾರ್ಕೆಟ್ ಮೂಲಕ ಕಡ್ಡಾಯವಾಗಿ ಖರೀದಿ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನದಲ್ಲಿ ಕಡ್ಡಾಯವಾಗಿ ಪಿಎಫ್ ಹಣ ಕಡಿತ ಮಾಡುವುದು ಎಲ್ಲಾ ಅಧಿಕಾರಿಗಳ ಜವಾಬ್ದಾರಿ ಎಂದರು.

2016-17ರಲ್ಲಿ ನಿಗದಿಪಡಿಸಿದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಾಧನೆ ತೋರದ ಇಲಾಖೆಗಳು ಸಮರ್ಪಕ ಕಾರಣದ ವರದಿ ನೀಡುವಂತೆ ಹಾಗೂ 2017-18ರ ಕ್ರಿಯಾ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆಗೆ ಸೂಕ್ತಕ್ರಮ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಯುವ ಸ್ಪಂದನ ಕುರಿತು ಮಾಹಿತಿ ಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News