ಶೋಷಿತರಿಗೆ ಆತ್ಮಸ್ಥೈರ್ಯ ನೀಡುವ ಚಳವಳಿಗಳು ಬಲಿಷ್ಠಗೊಳ್ಳಲಿ: ಮುನೀರ್ ಕಾಟಿಪಳ್ಳ

Update: 2017-04-24 15:45 GMT

ಕುಂದಾಪುರ, ಎ.24: ಉಳ್ಳವರು ಇಂದು ದಲಿತರು ಹಾಗೂ ಮುಸ್ಲಿಮರನ್ನು ಅನುಮಾನಿಸುತ್ತಿದ್ದಾರೆ. ಈ ಮೂಲಕ ದೇಶ ಅಪಾಯದತ್ತ ಸಾಗುತ್ತಿದೆ. ದಲಿತರು, ಮುಸಲ್ಮಾನರಿಗೆ ಆತ್ಮಸ್ಥೈರ್ಯ ನೀಡುವ ಚಳವಳಿಗಳು ಬಲಿಷ್ಠಗೊಳ್ಳ ಬೇಕಾಗಿವೆ. ಅವರ ನಿಜವಾದ ಸಮಸ್ಯೆಗಳ ಕುರಿತು ಹೋರಾಟ ನಡೆಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ದಬ್ಬಾಳಿಕೆಯ ವಿರುದ್ದ ನವಭಾರತದ ನಿರ್ಮಾಣ, ಉದ್ಯೋಗ, ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿರುವ ಡಿವೈಎಫ್‌ಐ ಕುಂದಾಪುರ ತಾಲೂಕು 14ನೆ ಸಮ್ಮೇಳನದ ಪ್ರತಿನಿಧಿ ಅಧಿವೇಶನ ವನ್ನು ರವಿವಾರ ಕುಂದಾಪುರ ಕಾರ್ಮಿಕ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ದೇಶದಲ್ಲಿ ಬಡವರು ಹಸಿವಿನಿಂದ ಸಾಯುತ್ತಿದ್ದಾರೆ. ಆದರೆ ಈ ನೈಜ ಸ್ಥಿತಿಯ ಕುರಿತು ಎಲ್ಲೂ ಚರ್ಚೆಗಳಾಗುತ್ತಿಲ್ಲ. ಬದಲಾಗಿ ಅಗತ್ಯವಿಲ್ಲದ ವಿಷಯಗಳ ಕುರಿತು ಮಾಧ್ಯಮಗಳು ಚರ್ಚೆ ನಡೆಸುತ್ತಿವೆ. ಯುವ ಜನರಿಗೆ ಉದ್ಯೋಗ ಸಿಗದೆ ಬೇರೆ ದೇಶಗಳಲ್ಲಿ ಗುಲಾಮರಂತೆ ಬದುಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ರಾಜಕೀಯ ನಾಯಕರು ಕೋಮು ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಯುವ ಜನರು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಡಿವೈಎಫ್‌ಐ ತಾಲೂಕು ಅಧ್ಯಕ್ಷ ಸಂತೋಷ ಹೆಮ್ಮಾಡಿ ವಹಿಸಿದ್ದರು. ಡಿವೈಎಫ್‌ಐ ಮಾಜಿ ಮುಖಂಡ ಸುಬ್ಬ ಮಾವಿನಕಟ್ಟೆ ಸಮ್ಮೇಳನದ ದ್ವಜಾರೋಹಣಗೈದರು. ಡಿವೈಎಫ್‌ಐ ಮಾಜಿ ಮುಖಂಡ ಎಚ್.ನರಸಿಂಹ, ತಾಲೂಕು ಉಪಾಧ್ಯಕ್ಷ ಸುರೇಶ ಕಲ್ಲಾಗರ, ಕಾರ್ಯದರ್ಶಿ ರಾಜೇಶ ವಡೇರ ಹೋಬಳಿ ಮುಖ್ಯಅತಿಥಿಗಳಾಗಿದ್ದರು.

ಎಸ್‌ಎಫ್‌ಐ ಮುಖಂಡ ಆಲ್ಡ್ರೀನ್ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು. ಡಿವೈಎಫ್‌ಐ ಮುಖಂಡ ಮಂಜುನಾಥ ಶೋಗನ್ ಸ್ವಾಗತಿಸಿದರು. ರವಿ ವಿ.ಎಂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News