‘ಬಾಬರಿ ಮಸೀದಿ ಧ್ವಂಸ ಹೋರಾಟದ ಭಾಗ’: ಪೇಜಾವರ ಶ್ರೀ ಹೇಳಿಕೆಗೆ ಮುಸ್ಲಿಮ್ ಒಕ್ಕೂಟ ಖಂಡನೆ

Update: 2017-04-24 17:26 GMT

ಉಡುಪಿ, ಎ.24: ಬಾಬರಿ ಮಸೀದಿ ಧ್ವಂಸದಂತಹ ಹೇಯ ಕೃತ್ಯವನ್ನು ಹೋರಾಟ ಎಂಬುದಾಗಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ಸಮರ್ಥಿಸುವ ಮೂಲಕ ಪೇಜಾವರ ಸ್ವಾಮೀಜಿ ತಮ್ಮ ನೈತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಒಂದು ಧರ್ಮದ ಅತ್ಯಂತ ಹಿರಿಯ ಸ್ವಾಮೀಜಿಯಾಗಿ ಇನ್ನೊಂದು ಧರ್ಮದ ಆರಾಧನಾ ಕೇಂದ್ರ ಧ್ವಂಸ ಮಾಡಿರುವುದನ್ನು ಸಮರ್ಥಿಸಿಕೊಳ್ಳುವುದು ಪೇಜಾವರ ಸ್ವಾಮೀಜಿಗೆ ಭೂಷಣವಲ್ಲ ಎಂದು ಒಕ್ಕೂಟ ಟೀಕಿಸಿದೆ.

ಮುಸ್ಲಿಂ ಸಮುದಾಯದ ಸಮಾರಂಭಗಳಲ್ಲಿ ಭಾಗವಹಿಸುವ ಪೇಜಾವರಶ್ರೀ, ಈ ಘಟನೆ ಆಕಸ್ಮಿಕ, ನಾನು ಎಲ್ಲ ಧರ್ಮದವರೊಂದಿಗೆ ಸ್ನೇಹಮಯಿ ಯಾಗಿದ್ದೇನೆ ಎಂಬುದಾಗಿ ಈ ಹಿಂದೆ ಹಲವಾರು ಬಾರಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ಸಮಯ ಸಾಧಕತನವನ್ನು ತೋರಿಸುತ್ತಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ಹಿಂದೆ ಭಾವೋದ್ವೇಗದಿಂದ ನಡೆದು ಹೋದ ಘಟನೆ ಎಂದು ಹೇಳಿಕೆ ನೀಡುತ್ತಿದ್ದ ಮಹಾಮಹಿಮರುಗಳು, ದೇಶದ ಹಾಗೂ ಸಂವಿಧಾನದ ವಿರುದ್ಧದ ಸಂಚು, ಷಡ್ಯಂತ್ರವನ್ನು ಹೋರಾಟವೆಂದು ಬಣ್ಣಿಸುವ ಹಂತಕ್ಕೆ ಬಂದಿರುವುದು ದುರಂತ. ಇದು ಸ್ವಾಮೀಜಿಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಇರುವ ತಾತ್ಸಾರ ಭಾವ ಇರುವುದನ್ನು ಸೂಚಿಸುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News