ಕಿನ್ನಿಗೋಳಿ: ಎಸ್ ಡಿಪಿಐ ವತಿಯಿಂದ ರಕ್ತದಾನ ಶಿಬಿರ
ಮುಲ್ಕಿ, ಎ.24: ಮನುಷ್ಯನೊಬ್ಬನ ಪ್ರಾಣ ಉಳಿಸಲು ಸಹಕಾರಿಯಾಗುವ ರಕ್ತದಾನದಂತಹ ಶ್ರೇಷ್ಠ ಕಾರ್ಯಗಳಲ್ಲಿ ಯುವ ಜನಾಂಗ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕೆಂದು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ ಹೇಳಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಘಟಕ ಹಾಗೂ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ರೆಡ್‌ಕ್ರಾಸ್ ಸಹಯೋಗದೊಂದಿಗೆ ಕಿನ್ನಿಗೋಳಿಯ ಶಾಂತಿನಗರದ ಕೆಜೆಎಮ್ ಸಮುದಾಯ ಭವನದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಸಮಾಜದ ಹಿತದೃಷ್ಟಿಯಲ್ಲಿ ಬಹಳ ಒಳ್ಳೆಯದು. ಅದರ ಜೊತೆಗೆ ಮನುಷ್ಯನೊಬ್ಬನ ಪ್ರಾಣ ಉಳಿಸುವ ನಿಟ್ಟಿನಲ್ಲಿ ಮಾಡಬಹುದಾದ ರಕ್ತದಾನ ಕಾರ್ಯಕ್ರಮದಲ್ಲೂ ಯುವಕರು ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಯುವಕರಲ್ಲಿ ರಕ್ತದಾನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಚಾರ ಎಂದರು.
ಕಿನ್ನಿಗೋಳಿ ಗ್ರಾಪಂ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಮಾತನಾಡಿ, ರಕ್ತದಾನದಂತಹ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲಾ ವರ್ಗಗಳು ಒಂದಾಗಿ ಬೆಂಬಲಿಸಬೇಕಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ನಡೆಯುವಂತಾಗಲಿ ಎಂದು ಶುಭಹಾರೈಸಿದರು.
ಗುತ್ತಕಾಡು ಕೆಜೆಎಂ ಸಹ ಉಸ್ತಾದರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆಶೀರ್ವಚನ ನೀಡಿದರು. ಎಸ್‌ಡಿಪಿಐ ಕಿನ್ನಿಗೋಳಿ ವಲಯಾಧ್ಯಕ್ಷ ಇಬ್ರಾಹಿಂ ಗುತ್ತಕಾಡು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯ ಹಾಜಿ ಟಿ.ಎಚ್.ಮಯ್ಯದ್ದಿ, ಎಸ್‌ಡಿಪಿಐ ಮುಲ್ಕಿ-ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಜಮಾಲ್ ಜೋಕಟ್ಟೆ, ಕೆಜೆಎಮ್ ಅಧ್ಯಕ್ಷ ಅಬ್ದುಲ್ ರಹ್‌ಮಾನ್, ಪಿಎಫ್‌ಐ ಗುತ್ತಕಾಡು ಘಟಕಾಧ್ಯಕ್ಷ ನವಾಝ್ ಹುಸೈನ್, ಉದ್ಯಮಿ ಅಬೂಸಾಲಿಹ್, ಲೇಡಿಗೋಶನ್ ವೈದ್ಯಾಧಿಕಾರಿ ಎಡ್ವರ್ಡ್ ಹಾಗೂ ಸಮಾಜ ಸೇವಕ ಇಲ್ಯಾಸ್ ಬಜ್ಪೆ ಉಪಸ್ಥಿತರಿದ್ದರು.
ಅಬ್ದುಲ್ ಕರೀಂ ಸ್ವಾಗತಿಸಿ, ಜಲೀಲ್ ವಂದಿಸಿದರು. ಅಬ್ದುಲ್ ಜಲೀಲ್ ನಿರೂಪಿಸಿದರು