×
Ad

ಎಡಪದವು: ಬೇಸಿಗೆ ಶಿಬಿರ ಸಮಾರೋಪ

Update: 2017-04-24 23:00 IST

ಮಂಗಳೂರು, ಎ. 24: ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ವತಿಯಿಂದ ನಡೆಸಲಾದ ಮಕ್ಕಳ ಬೇಸಿಗೆ ಶಿಬಿರದ ವಿವಿಧ ಕಾರ್ಯಕ್ರಮಗಳ ಸಮಾರೋಪ, ಕುಟುಂಬ ಸಭೆ ಮತ್ತು ಮುಸ್ಲಿಮ್ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನದ ಉಧ್ಘಾಟನಾ ಕಾರ್ಯಕ್ರಮವು ಎಡಪದವು ಮಸೀದಿ ಬಳಿಯ ಮೈದಾನದಲ್ಲಿ ಜರಗಿತು.

ಕಸಬಾ ಬೆಂಗರೆಯ ಎ.ಆರ್.ಕೆ. ಶಾಲೆಯ ಅಧ್ಯಾಪಕ ಅಬ್ದುಲ್ಲತೀಫ್ ಅಲಿ ಇಸ್ಲಾಮೀ ಕುಟುಂಬ ಎಂಬ ವಿಷಯದಲ್ಲಿ ಮತನಾಡಿ, ಅಲ್ಲಾಹನ ಅನುಗ್ರಹಗಳು ದೊರೆಯಬೇಕಾದರೆ ಕುಟುಂಬ ಸಂಬಂಧವನ್ನು ಬಲಪಡಿಸಿರಿ, ಅದು ಸ್ವರ್ಗದ ಉದ್ಯಾನಗಳನ್ನು ವಿಸ್ತರಿಸುವ ದಾರಿಯಾಗಿದೆ. ಕುಟುಂಬ ಸಂಬಂಧವನ್ನು ಮುರಿಯುವವನು ತನ್ನ ಅಧಃಪತನವನ್ನು ತಾನೇ ಮಾಡಿಕೊಂಡಂತೆ. ತಂದೆ ತಾಯಿಯರೊಂದಿಗೆ ಸದ್ವರ್ತನೆ ತೋರಬೇಕು. ಅವರು ಎಷ್ಟೇ ಕೆಟ್ಟವರಾಗಿದ್ದರೂ ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕು ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಸಈದ್ ಇಸ್ಮಾಯಿಲ್, "ಮುಸ್ಲಿಂ ವೈಯಕ್ತಿಕ ಕಾನೂನು ಏಕೆ ಮತ್ತು ಹೇಗೆ?" ಎಂಬ ವಿಷಯದಲ್ಲಿ ಮಾತನಾಡುತ್ತಾ, ಕಾನೂನು ಎಂದರೆ ಅನುಸರಿಸುವುದಾಗಿದೆ. ತಿದ್ದುಪಡಿಯಾಗುವುದು ಕಾನೂನಾಗಲಾರದು. ಶರೀಯತ್ ಅಲ್ಲಾಹನ ಕಾನೂನಾಗಿದೆ ಹಾಗಾಗಿ ಅದರಲ್ಲಿ ತಿದ್ದುಪಡಿ ಅಸಾಧ್ಯ. ಶರೀಯತ್ ಕಾನೂನು ಇಲ್ಲದಾಗಿಸಲು ಬ್ರಿಟಿಷರು ಹಲವಾರು ತಿದ್ದುಪಡಿಯನ್ನು ಬಯಸಿದರು. ಅದರಂತೆ ಕ್ರಿಮಿನಲ್ ಕಾನೂನನ್ನು ಕೈಬಿಟ್ಟರು. ‘ಮುಹಮ್ಮದೀಯನ್ ಲಾ’ ಎಂಬ ಹೆಸರಿನಲ್ಲಿ ಉಳಿಸಿಕೊಂಡ ಸಿವಿಲ್ ಕಾನೂನಿಗೆ 1937ರಲ್ಲಿ ‘ಮುಸ್ಲಿಮ್ ಪರ್ಸನಲ್ ಲಾ’ ಎಂಬ ಹೆಸರಿನಲ್ಲಿ ಶರೀಯತ್ ಕಾನೂನನ್ನು ಉಳಿಸಿಕೊಳ್ಳಲಾಯಿತು. ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂದು ಹಲವಾರು ಪ್ರಯತ್ನಗಳು ಇಂದು ನಡೆಯುತ್ತಿದೆ. ಇಲ್ಲಿನ ಎಲ್ಲಾ ಮುಸ್ಲಿಮ್ ಪ್ರಗತಿಪರರು ಮುಸ್ಲಿಮರ ಅಭಿವೃದ್ಧಿಗಾಗಿ ಯಾವುದೇ ಕೊಡುಗೆಯನ್ನೂ ಕೊಟ್ಟಿಲ್ಲ. ಆದರೂ ಮುಸ್ಲಿಮ್ ವೈಯಕ್ತಿಕ ಕಾನೂನಿನ ಬಗ್ಗೆ ಮಾತನಾಡುತ್ತಾರೆ ಎಂದರು.

ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಎಡಪದವು ವರ್ತುಲದ ಸಂಚಾಲಕರಾದ ಸುಲೈಮಾನ್ ಕಿರಾಅತ್ ಪಠಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News