ಉಡುಪಿ: ಕಲ್ಲುಕೋರೆಯ ನೀರಿನಲ್ಲಿ ಮುಳುಗಿ ತಾಯಿ, ಮಗು ಮೃತ್ಯು

Update: 2017-04-25 18:44 GMT

ಉಡುಪಿ, ಎ.25: ಪಡು ಅಲೆವೂರು ಗ್ರಾಮದ ದುರ್ಗಾನಗರ ಎಂಬಲ್ಲಿ ಬಟ್ಟೆ ಒಗೆಯುತ್ತಿದ್ದ ತಾಯಿ, ಮಗು ಕಲ್ಲುಕೋರೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟ ದಾರುಣ ಘಟನೆ ಇಂದು ಪೂ.11:15ರ ಸುಮಾರಿಗೆ ನಡೆದಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯ ಯಮನಪ್ಪ ಅಸಂಗಿಯ ಪತ್ನಿ ದ್ಯಾಮವ್ವ ಯಾನೆ ನೀಲವ್ವ(29) ಹಾಗೂ ಅವರ ಎರಡನೆ ಮಗ ಹನುಮಂತ(5) ಮೃತಪಟ್ಟವರು. ಇವರು ಕಳೆದ 25 ವರ್ಷಗಳಿಂದ ಪಡು ಅಲೆವೂರಿನ ದುರ್ಗಾ ನಗರದಲ್ಲಿ ವಾಸವಾಗಿದ್ದರು.

ಬಟ್ಟೆ ಒಗೆಯುವ ಸಂದರ್ಭ ಹನುಮಂತ ನೀರಿನಲ್ಲಿ ಆಟ ಆಡುತ್ತ ಸುಮಾರು 25 ಅಡಿ ಅಳದ ಕೋರೆಗೆ ಜಾರಿ ಬಿದ್ದನು. ನೀರಿನಲ್ಲಿ ಮುಳುಗುತ್ತಿರುವ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾದರು ಎನ್ನಲಾಗಿದೆ.

ಈ ವೇಳೆ ಸ್ಥಳೀಯ ಟ್ರಾಕ್ಟರ್ ಚಾಲಕರೊಬ್ಬರು ಸೀರೆಯನ್ನು ಎಸೆದು ದ್ಯಾಮವ್ವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಣಿಪಾಲ ಪೊಲೀಸರು ದೋಣಿ ಮೂಲಕ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದರು.

ಆದರೂ, ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ದೆಂದೂರುಕಟ್ಟೆಯ ಮುಳುಗುತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಅಪರಾಹ್ನ 1 ಗಂಟೆಯ ಸುಮಾರಿಗೆ ತಾಯಿ ಮಗನ ಮೃತದೇಹವು ಒಂದೇ ಕಡೆಯಲ್ಲಿ ಪತ್ತೆ ಯಾಯಿತು.

ಅಪಾಯಕಾರಿ ಕೋರೆ

ಅಲೆವೂರು ಗ್ರಾಪಂ ವ್ಯಾಪ್ತಿಯ ಪಡು ಅಲೆವೂರು ಗ್ರಾಮ ದುರ್ಗಾನಗರದಲ್ಲಿ ಬಾಗಲಕೋಟೆಯ ಸುಮಾರು 75 ವಲಸೆ ಕಾರ್ಮಿಕರ ಕುಟುಂಬಗಳು ಕಳೆದ 25 ವರ್ಷಗಳಿಂದ ವಾಸವಾಗಿವೆ. ಬೇಸಿಗೆಯಾಗಿರುವುದರಿಂದ ಗ್ರಾಪಂ ನಿಂದ ಇವರಿಗೆ ಮೂರು ದಿನಕೊಮ್ಮೆ ನೀರು ಬರುತ್ತಿರುವುದರಿಂದ ಸ್ನಾನ ಹಾಗೂ ಬಟ್ಟೆ ಒಗೆಯಲು ಇದೇ ಕೋರೆಗೆ ಹೋಗುತ್ತಿದ್ದರು.

ಅಪಾಯಕಾರಿಯಾಗಿರುವ ಈ ಕೋರೆಗೆ ಬಾರದಂತೆ ಸ್ಥಳೀಯರು ಇವರನ್ನು ಹಲವು ಬಾರಿ ಎಚ್ಚರಿಸಿದ್ದರು. 25 ವರ್ಷಗಳಿಂದ ಪೆರುಪಾದೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಐದು ವರ್ಷಗಳ ಹಿಂದೆಯಷ್ಟೇ ಗುತ್ತಿಗೆದಾರರು ಗಣಿಗಾರಿಕೆಯನ್ನು ನಿಲ್ಲಿಸಿದ್ದರು. ಇಲ್ಲಿನ ನೀರಿಗೆ ಯಾರು ಇಳಿಯದಂತೆ ಸುತ್ತ ಮಣ್ಣು ಹಾಕಿ ತಡೆಗೋಡೆಯನ್ನು ನಿರ್ಮಿಸಿ ಸೂಚನಾ ಫಲಕವನ್ನು ಸ್ಥಾಪಿಸಲಾಗಿತ್ತು. ಆದರೆ, ಈಗ ತಡೆಗೋಡೆ ಬಿದ್ದು ಹೋಗಿದ್ದು, ಫಲಕವನ್ನು ಕಿತ್ತು ಹಾಕಲಾಗಿದೆ. ದುರಂತ ನಡೆದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಎ.26ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಪ್ರಕರಣ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಊರಿಗೆ ತೆಗೆದುಕೊಂಡು ಹೋಗಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News