ಡೋಪಿಂಗ್ ಟೆಸ್ಟ್: ಭಾರತದ ಗೋಲ್‌ಕೀಪರ್ ಸುಬ್ರತಾ ಪಾಲ್ ವಿಫಲ

Update: 2017-04-25 17:27 GMT

ಹೊಸದಿಲ್ಲಿ, ಎ,.25: ಭಾರತದ ಉದಯೋನ್ಮುಖ ಗೋಲ್‌ಕೀಪರ್ ಸುಬ್ರತಾ ಪಾಲ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮಂಗಳವಾರ ತಿಳಿಸಿದೆ.

 ‘‘ಅರ್ಜುನ ಪ್ರಶಸ್ತಿ ವಿಜೇತ ಫುಟ್ಬಾಲ್ ಆಟಗಾರ ಸುಬ್ರತಾ ಪಾಲ್ ಕಳೆದ ತಿಂಗಳು ನಡೆದ ಡೋಪಿಂಗ್‌ನ ‘ಎ’ ಮಾದರಿಯ ಪರೀಕ್ಷೆ ಪಾಸಿಟಿವ್ ಆಗಿದೆ. ಅವರು ನಿಷೇಧಿತ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ’’ ಎಂದು ಎಐಎಫ್‌ಎಫ್ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆಯಿರುವವರು ತೆಗೆದುಕೊಳ್ಳುವ ದ್ರವ್ಯ ಟರ್ಬುಟಲಿನ್ ಪಾಲ್ ಸೇವಿಸಿದ್ದಾರೆ. ವಾಡಾ ಪ್ರಕಾರ ಈ ದ್ರವ್ಯ ನಿಷೇಧಿತ ಪಟ್ಟಿಯಲ್ಲಿದೆ. ಎಐಎಫ್‌ಎಫ್‌ಗೆ ನಾಡಾ ಕಳುಹಿಸಿರುವ ಪತ್ರದಲ್ಲಿ ಸುಬ್ರತಾರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ದಾಸ್ ಪಿಟಿಐಗೆ ತಿಳಿಸಿದ್ದಾರೆ.

  ನಾಡಾ ಅಧಿಕಾರಿಗಳು ಮಾರ್ಚ್‌ನಲ್ಲಿ ಭಾರತದ ಮಾಜಿ ನಾಯಕ ಪಾಲ್‌ರನ್ನು ಪರೀಕ್ಷೆಗೆ ಒಳಪಡಿಸಿದ್ದರು ಎಂದು ರಾಷ್ಟ್ರೀಯ ಉದ್ದೀಪನಾ ತಡೆ ಘಟಕದ ಮುಖ್ಯಸ್ಥ ನವೀನ್ ಅಗರವಾಲ್ ದೃಢಪಡಿಸಿದ್ದಾರೆ.

  ‘‘ಬಿ ಸ್ಯಾಂಪಲ್ ಪರೀಕ್ಷೆಗೆ ಒಳಗಾಗಬೇಕೇ ಎಂಬ ಕುರಿತು ಪಾಲ್ ಹಾಗೂ ನಾಡಾ ಅಧಿಕಾರಿಗಳು ನಿರ್ಧರಿಸಬೇಕಾಗಿದೆ. ಪಾಲ್‌ಗೆ ಅಗತ್ಯವಿದ್ದರೆ ಮಾರ್ಗದರ್ಶನ ನೀಡಲು ನಾವು ಸದಾ ಸಿದ್ಧ’’ ಎಂದು ದಾಸ್ ಹೇಳಿದ್ದಾರೆ.

   ಪಶ್ಚಿಮ ಬಂಗಾಳದ ಪಾಲ್ ಭಾರತದ ಶ್ರೇಷ್ಠ ಗೋಲ್‌ಕೀಪರ್ ಪೈಕಿ ಒಬ್ಬರಾಗಿದ್ದು, ಬಾಬ್ ಹಾಟನ್ ಹಾಗೂ ಬೈಚುಂಗ್ ಭುಟಿಯಾ ಭಾರತದ ಕೋಚ್ ಆಗಿದ್ದ ಅವಧಿಯಲ್ಲಿ ಪಾಲ್ ನಂ.1 ಗೋಲ್‌ಕೀಪರ್ ಆಗಿದ್ದರು. 2007 ಹಾಗೂ 2009ರಲ್ಲಿ ಭಾರತ ತಂಡ ನೆಹರೂ ಕಪ್ ಇಂಟರ್‌ನ್ಯಾಶನಲ್ ಟೂರ್ನಮೆಂಟ್ ಗೆಲ್ಲುವಲ್ಲಿ ಹಾಗೂ 2008ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಭಾರತ ಗೆಲುವು ಸಾಧಿಸಲು ಪಾಲ್ ಮುಖ್ಯ ಪಾತ್ರವಹಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಪಾಲ್ ನಂ.1 ಗೋಲ್‌ಕೀಪರ್ ಆಗಿ ಉಳಿದಿಲ್ಲ. ಅವರ ಸ್ಥಾನದಲ್ಲೀಗ ಗುರುಪ್ರೀತ್ ಸಿಂಗ್ ಸಂಧು ಅವರಿದ್ದಾರೆ.

‘‘ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲವಾಗಿರುವ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ನಾಡಾ ಅಥವಾ ಎಐಎಫ್‌ಎಫ್‌ನಿಂದ ಅಧಿಕೃತವಾಗಿ ಮಾಹಿತಿ ಪಡೆದಿಲ್ಲ. ಮಾಧ್ಯಮದ ಮೂಲಕವೇ ಈ ವಿಷಯ ನನಗೆ ಗೊತ್ತಾಗಿದೆ. ಕಳೆದ 10 ವರ್ಷಗಳಿಂದ ಪ್ರಾಮಾಣಿಕತೆಯಿಂದ ಆಡಿದ್ದು, ಮುಗ್ದ ಎಂದು ಸಾಬೀತುಪಡಿಸುವೆ. ನಾನು ‘ಬಿ’ ಸ್ಯಾಂಪಲ್ ಪರೀಕ್ಷೆಗೆ ಅರ್ಜಿ ಸಲ್ಲಿಸಲಿದ್ದು, ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾಗುವಂತಹ ಯಾವುದೇ ಕೆಲಸ ಮಾಡಿಲ್ಲ. ಮುಂಬೈ ನ್ಯಾಶನಲ್ ಕ್ಯಾಂಪ್‌ನಲ್ಲಿ ಎಲ್ಲ ಆಟಗಾರರ ಡೋಪಿಂಗ್ ಪರೀಕ್ಷೆ ನಡೆದಿತ್ತು. ಅದರಲ್ಲಿ ಫೇಲಾದ ವಿಷಯ ಕೇಳಿ ಅಚ್ಚರಿಯಾಗಿದೆ’’

ಸುಬ್ರತಾ ಪಾಲ್, ಭಾರತದ ಗೋಲ್‌ಕೀಪರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News