×
Ad

​ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆ ನಿವೇಶನ: ಸಚಿವ ರೈ

Update: 2017-04-25 17:46 IST

ಮಂಗಳೂರು, ಎ.25: ಸ್ವತ: ಹೆತ್ತವರು, ಮನೆ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸರಕಾರ ಕಾಳಜಿ ವಹಿಸಿದೆ. "ಮೈತ್ರಿ" ಯೋಜನೆಯಡಿ 500 ರೂ. ಮಾಸಾಶನ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈಗಾಗಲೆ ಸಾವಿರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜೊತೆಗೆ ಸ್ವಾವಲಂಬಿ ಬದುಕು ಸಾಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದೀಗ ಮನೆ ನಿವೇಶನ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ನವಸಹಜ ಸಮುದಾಯ ಸಂಘಟನೆ (ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆ-ರಿ) ಯು ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ನಡೆದ ‘ಲಿಂಗತ್ವ ಅಲ್ಪಸಂಖ್ಯಾತರ ವಾರ್ಷಿಕ ಮಹಾಸಭೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರು ಯಾವ ಕಾರಣಕ್ಕೂ ಎದೆಗುಂದಬಾರದು. ಕೀಳರಿಮೆ ತೊಡೆದುಹಾಕಿ ಆತ್ಮಸ್ಥೈರ್ಯ ಬೆಳೆಸಿ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡು ಸ್ವಾವಲಂಬಿಗಳಾಗಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ ಎಂದು ಸಚಿವ ರಮಾನಾಥ ರೈ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವವಹಿಸಿ ಮಾತನಾಡಿದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಣ್ಣ ಗೌಡ, ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದ ಅನುಕಂಪ ಬೇಡ. ಅವರ ಬಗ್ಗೆ ಪ್ರೀತಿ ಮತ್ತು ಕಾಳಜಿ ತೋರಿಸಬೇಕಿದೆ. ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಮನೆಯಿಂದಲೇ ದೌರ್ಜನ್ಯ ಆರಂಭವಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ಈ ಸಮುದಾಯದ ಮಂದಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ಪಯಣ ಸಂಸ್ಥೆಯ ಅಧ್ಯಕ್ಷೆ, ಸಾಹಿತಿ ಚಾಂದಿನಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರು ವಾಸ್ತವನ್ನು ತೆರೆದಿಡಬೇಕು. ಇದು ವರವೋ, ಶಾಪವೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸತ್ಯವನ್ನು ಬಹಿರಂಗಪಡಿಸಿಕೊಂಡು ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕು. ಮಂಗಳೂರಿನಲ್ಲಿ 1,700ಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರರಿದ್ದಾರೆ. ಎಲ್ಲರೂ ಇಲ್ಲಿ ಸೇರಿದ್ದರೆ ಸಂಘಟನೆಯ ಹೋರಾಟದ ಕಿಚ್ಚು ಹೆಚ್ಚುತ್ತಿತ್ತು’ ಎಂದರು.

ಲಿಂಗತ್ವ ಅಲ್ಪಸಂಖ್ಯಾತರು ಲೈಂಗಿಕ ಕಾರ್ಯಕರ್ತೆಯರಾಗಿ, ಭಿಕ್ಷೆ ಬೇಡಿ ಬದುಕು ಸಾಗಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಅದೆಲ್ಲವೂ ಸಂಪೂರ್ಣ ಸತ್ಯವಲ್ಲ. ಲಿಂಗತ್ವ ಅಲ್ಪಸಂಖ್ಯಾತರಲ್ಲೂ ರೇಡಿಯೋ ಜಾಕಿಗಳು, ಪೊಲೀಸ್ ಅಧಿಕಾರಿಗಳು, ಉಪನ್ಯಾಸಕರು ಇದ್ದಾರೆ. ವಾಸ್ತವ ಏನು ಎಂಬುದನ್ನು ಹೆತ್ತವರು ಅರಿತುಕೊಂಡು ಶಿಕ್ಷಣ ನೀಡಿದರೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರೂ ಕೂಡ ಕೀಳರಿಮೆ ಬದಿಗಿಟ್ಟು ಸಮಾಜದ ಮುಖ್ಯವಾಹಿನಿಗೆ ಸೇರಬೇಕಿದೆ ಎಂದು ಚಾಂದಿನಿ ನುಡಿದರು.

‘ಸಾರಥ್ಯ’ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹೇಶ್ ಪಾಟೀಲ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಯಾವ ಕಾರಣಕ್ಕೂ ಹಿಂಜರಿಯಬಾರದು. ತಮ್ಮ ಮೇಲಾಗುವ ದೌರ್ಜನ್ಯದ ವಿರುದ್ಧ ದಿಟ್ಟ ಹೋರಾಟ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ನವ ಸಹಜ ಸಮುದಾಯ ಸಂಘಟನೆಯ ಅಧ್ಯಕ್ಷ ಪ್ರವೀಣ್ ನಿಖಿಲ ಮಾತನಾಡಿ, ಮಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಪೊಲೀಸ್ ಇಲಾಖೆಯಿಂದ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಉಡುಪಿಯ ಆಶಯ ಸಂಘಟನೆಯ ಸಂಜೀವ ವಂಡ್ಸೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೀಕ್ಷಕಿ ಚಂದ್ರಿಕಾ ನಾಯ್ಕ ಮಾತನಾಡಿದರು.

ಈ ಸ್ಥಿತಿಯಲ್ಲಿ ಹುಟ್ಟಿದ ತಪ್ಪಿಗೆ ನಾವು ಮಾತ್ರವಲ್ಲ ಹೆತ್ತವರೂ ಕೊರಗುವಂತಾಗಿದೆ. ನಮಗೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಬಾಡಿಗೆಗೆ ಮನೆ ಕೊಡಿ ಎಂದು ಕೇಳಿದರೂ ಕೊಡುತ್ತಿಲ್ಲ. ನಾವು ಮನುಷ್ಯರಲ್ಲವೇ? ನಾವು ಸ್ವಾಭಿಮಾನದ ಬದುಕು ಸಾಗಿಸುವುದು ಬೇಡವೇ? ನಮ್ಮ ಮನಸ್ಸನ್ನು ಅರ್ಥ ಮಾಡಿ. ನಾವೇನು ಎಂಬುದರ ಬಗ್ಗೆ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ. ನಮ್ಮನ್ನು ಮನೆಯಿಂದ ಹೊರಗೆ ಹಾಕದೆ ಸಮಾಜದೊಳಗೆ ಸೇರಿಸಿ.
ಸಂಧ್ಯಾ ಬಳ್ಳಾರಿ, ಲಿಂಗತ್ವ ಅಲ್ಪಸಂಖ್ಯಾತರು

ಸಮಾಜದ ಮುಖ್ಯವಾಹಿನಿಗೆ ಸೇರುವ ಆಸೆ ನನಗಿದೆ. ಹಾಗಾಗಿ ನಮ್ಮನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನಾನು ದ್ವಿತೀಯ ಪಿಯುಸಿಯಲ್ಲಿ ಶೇ.85 ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಐಎಎಸ್ ಮಾಡಬೇಕು ಅಂತ ಕನಸು ಹೊತ್ತಿದ್ದೇನೆ.

ಕಾಜಲ್ ಉಡುಪಿ, ಲಿಂಗತ್ವ ಅಲ್ಪಸಂಖ್ಯಾತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News