2017-18ರಲ್ಲಿ ದಾಖಲೆಯ 273 ಮಿ.ಟ. ಆಹಾರಧಾನ್ಯ ಉತ್ಪಾದನೆ ಸರಕಾರದ ಗುರಿ

Update: 2017-04-25 12:29 GMT

ಹೊಸದಿಲ್ಲಿ,ಎ.25: ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿರುವ ದೇಶವು ಜುಲೈನಿಂದ ಆರಂಭಗೊಳ್ಳುವ 2017-18ನೇ ಬೆಳೆ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆಯ 273 ಮಿಲಿಯನ್ ಟನ್ ಆಹಾರಧಾನ್ಯಗಳನ್ನು ಉತ್ಪಾದಿಸುವ ಮತ್ತು ಶೇ.4ರ ಕೃಷಿ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಸಚಿವಾಲಯದ ಎರಡನೇ ಅಂದಾಜಿನಂತೆ ಎರಡು ವರ್ಷಗಳ ಬರದ ಬಳಿಕ ಉತ್ತಮ ಮಳೆಯಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ (ಜೂನ್-ಜುಲೈ) ದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆಯ 271.98 ಮಿ.ಟ.ಮುಟ್ಟಬಹುದು.

ಮುಂಬರುವ ಮುಂಗಾರು ಋತುವಿನಲ್ಲಿ ಬಿತ್ತನೆ ಕಾರ್ಯತಂತ್ರವನ್ನು ಚರ್ಚಿಸಲು ಏರ್ಪಡಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಈ ವಿಷಯವನ್ನು ತಿಳಿಸಿದ ಕೃಷಿ ಸಚಿವ ರಾಧಾ ಮೋಹನ ಸಿಂಗ್ ಅವರು, ಈ ವರ್ಷದ ಮುಂಗಾರು ಮಳೆ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು ಇಚ್ಛಿತ ಗುರಿಯನ್ನು ಸಾಧಿಸಲು ನೆರವಾಗಲಿದೆ ಎಂದರು.

ಸಾಮಾನ್ಯವಾಗಿ ಸುಮಾರು 72 ಮಿ.ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಯ ಬಿತ್ತನೆ ನಡೆಯುತ್ತದೆ. ಭತ್ತ, ಬೇಳೆಕಾಳುಗಳು, ಎಣ್ಣೆಬೀಜಗಳು, ಹತ್ತಿ ಮತ್ತು ಕಬ್ಬು ಈ ಋತುವಿನಲ್ಲಿ ಬಿತ್ತನೆಗೊಳ್ಳುವ ಪ್ರಮುಖ ಬೆಳೆಗಳಾಗಿವೆ.

ಕೊಯ್ಲು ಪೂರ್ವ ಮತ್ತು ಕೊಯ್ಲೋತ್ತರ ಅವಧಿಗಳಲ್ಲಿ ರೈತರಿಗೆ ಸಕಾಲಿಕ ಬೆಂಬಲವನ್ನು ಒದಗಿಸುವುದಕ್ಕೆ ಸಹಾಯಕ ಕೃಷಿ ಸಚಿವರಾದ ಪುರುಷೋತ್ತಮ ರುಪಾಲಾ ಮತ್ತು ಸುದರ್ಶನ ಭಗತ್ ಅವರು ಒತ್ತು ನೀಡಿದರು.

ಗುರಿ ಸಾಧನೆಯ ವಿಶ್ವಾಸ ವ್ಯಕ್ತಪಡಿಸಿದ ಕೃಷಿ ಕಾರ್ಯದರ್ಶಿ ಶೋಭನ ಪಟ್ಟನಾಯಕ್ ಅವರು, 2017=18 ನೇ ಸಾಲಿನಲ್ಲಿ ಶೇ.4ರ ಕೃಷಿ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು.

ಮುಂಗಾರು ಬೆಳೆ ಇಳುವರಿಯು ನೈಋತ್ಯ ಮಾನ್ಸೂನ್‌ನ್ನೇ ಪ್ರಮುಖವಾಗಿ ಅವಲಂಬಿಸಿರುವುದರಿಂದ ಮಳೆ ವಿಳಂಬ, ಸುದೀರ್ಘ ಅವಧಿಗೆ ಮಳೆಯಾಗದಿರುವಿಕೆ ಮತ್ತು ಅನಾವೃಷ್ಟಿ ಹಾಗೂ ಅತಿವೃಷ್ಟಿಯಂತಹ ಎಲ್ಲ ಸಂಭಾವ್ಯ ಸನ್ನಿವೇಶಗಳನ್ನು ಎದುರಿಸಲು ರಾಜ್ಯಗಳು ಯೋಜನೆ ರೂಪಿಸಬೇಕು ಎಂದ ಅವರು, ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ಪಾಲಿಸಿಗಳನ್ನು ಖರೀದಿಸಲು ಹೆಚ್ಚೆಚ್ಚು ರೈತರನ್ನು ಉತ್ತೇಜಿಸುವಂತೆ ಮತ್ತು 2017-18ನೇ ಬೆಳೆಸಾಲಿನಲ್ಲಿ ಬಿತ್ತನೆಯಾದ ಪ್ರದೇಶದ ಶೇ.40 ರಷ್ಟು ಭಾಗ ವಿಮಾರಕ್ಷಣೆ ಹೊಂದಿರುವಂತೆ ಮಾಡಲು ರಾಜ್ಯಗಳನ್ನು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News