ನಕ್ಸಲ್‌ರೊಂದಿಗೆ ಮೂರು ಗಂಟೆ ಕಾದಾಡಿದ್ದ ಯೋಧರು

Update: 2017-04-25 14:01 GMT

ರಾಯಪುರ್,ಎ.25: ಸೋಮವಾರ ಮಧ್ಯಾಹ್ನ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ದಟ್ಟಾರಣ್ಯದಲ್ಲಿ ಕನಿಷ್ಠ 300 ನಕ್ಸಲರ ಗುಂಪು 25 ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದ ಬೆನ್ನಲ್ಲೇ ವಾಯುಪಡೆಯು ರಕ್ಷಣಾ ಕಾರ್ಯಕ್ಕೆ ಧಾವಿಸಿತ್ತು. ಬಂಡುಕೋರರು ಗುಂಡಿನ ದಾಳಿ ನಡೆಸುವ ಆತಂಕಗಳಿದ್ದರೂ ಮಾವೋವಾದಿಗಳ ಭದ್ರಕೋಟೆಯ ನಡುವೆ ತನ್ನ ಹೆಲಿಕಾಪ್ಟರ್‌ಗಳನ್ನು ಇಳಿಸಿತ್ತು. ಸ್ವಯಂ ರಕ್ಷಣೆಗೆ ಯಾವುದೇ ಶಸ್ತ್ರಾಸ್ತ್ರ ಹೊಂದಿರದಿದ್ದ ಈ ಸಾರಿಗೆ ಹೆಲಿಕಾಪ್ಟರ್‌ಗಳು ಗಾಯಾಳು ಯೋಧರನ್ನು ತೆರವುಗೊಳಿಸುವಲ್ಲಿ ನೆರವಾ ದವು.

ಇದು ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದಿರುವ ಅತ್ಯಂತ ಭೀಕರ ದಾಳಿಯಾಗಿದ್ದು, ಯೋಧರು ಮೂರು ಗಂಟೆಗೂ ಅಧಿಕ ಸಮಯ ಬಂಡುಕೋರರೊಂದಿಗೆ ಕಾದಾಡಿದ್ದರು ಎಂದು ಛತ್ತೀಸ್‌ಗಡ ಪೊಲೀಸ್‌ನ ನಕ್ಸಲ್ ಕಾರ್ಯಾಚರಣೆಗಳ ಡಿಜಿ ಡಿ.ಎಂ.ಅವಸ್ಥಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ನಿನ್ನೆಯ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಇಲ್ಲಿಯ ಆಸ್ಪತ್ರೆಗೆ ದಾಖಲಾಗಿ ರು ಆರು ಯೋಧರನ್ನು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಭೇಟಿಯಾದರು.

  ಸುಮಾರು 100ರಷ್ಟಿದ್ದ ಸಿಆರ್‌ಪಿಎಫ್ ಯೋಧರು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ರಕ್ಷಣೆ ನೀಡುತ್ತಿದ್ದ ಸಂದರ್ಭ ನಕ್ಸಲರ ದಾಳಿ ನಡೆದಿದೆ. ದಾಳಿಕೋರರಲ್ಲಿ ಮಹಿಳೆಯರೂ ಇದ್ದರು. 25 ನಕ್ಸಲರ ಗುಂಪೊಂದು ಊಟ ಮಾಡುತ್ತಿದ್ದು, ಮೃತರಲ್ಲಿ ಹೆಚ್ಚಿನವರು ಈ ಗುಂಪಿನಲ್ಲಿದ್ದರು ಎಂದು ಅವಸ್ಥಿ ತಿಳಿಸಿದರು.

ಉಳಿದ ಯೋಧರು ತಕ್ಷಣವೇ ಪ್ರತಿದಾಳಿ ನಡೆಸಿದ್ದರು.

  ದಾಳಿಕೋರರು ರಾಕೆಟ್ ಲಾಂಚರ್‌ಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಎಕೆ 47 ಗಳನ್ನು ಹೊಂದಿದ್ದರು ಎಂದು ಗಾಯಾಳು ಯೋಧ ಶೇರ್ ಮುಹಮ್ಮದ್ ಹೇಳಿದರು. ಆದರೆ ರಾಕೆಟ್ ಲಾಂಚರ್‌ಗಳು ಅಥವಾ ಸುಧಾರಿತ ಸ್ಫೋಟಕ ಸಾಧನಗಳು ಬಳಕೆಯಾಗಿರುವುದನ್ನು ಅವಸ್ಥಿ ನಿರಾಕರಿಸಿದರು. ಸಿಆರ್‌ಪಿಎಫ್ ಪ್ರತಿದಾಳಿಯಲ್ಲಿ ಹಲವಾರು ಮಾವೋವಾದಗಳು ಕೊಲ್ಲಲ್ಪಟ್ಟಿದ್ದಾರೆಂದು ಅವರು ಹೇಳಿದರಾದರೂ ಸಂಖ್ಯೆಯನ್ನು ಬಹಿರಂಗಗೊಳಿಸಲಿಲ್ಲ. ಬಂಡುಕೋರರು ಸಿಆರ್‌ಪಿಎಫ್ ಕಮಾಂಡೋ ಗಳ ಎಕೆ 47 ರೈಫಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಮಾವೋವಾದಿಗಳು ಕಳೆದೊಂದು ವಾರದಿಂದಲೂ ಸಿಆರ್‌ಪಿಎಫ್ ಯೋಧರ ದೈನಂದಿನ ಚಲನವಲನಗಳನ್ನು ಗಮನಿಸುತ್ತಿದ್ದರು ಮತ್ತು ಎಲ್ಲಿ ಹಾಗೂ ಯಾವಾಗ ದಾಳಿ ನಡೆಸಬೇಕು ಎನ್ನುವುದು ಅವರಿಗೆ ತಿಳಿದಿತ್ತು ಎಂದು ಅವಸ್ಥಿ ತಿಳಿಸಿದರು. ಮೇ 8ರಂದು ಛತ್ತೀಸ್‌ಗಡದಂತಹ ನಕ್ಸಲ್ ಪೀಡಿತ ರಾಜ್ಯಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿರುವ ರಾಜನಾಥ ಸಿಂಗ್ ಅವರು, ಬಂಡಾಯವನ್ನು ಎದುರಿಸಲು ನಾವು ನಮ್ಮ ಕಾರ್ಯತಂತ್ರವನ್ನು ಪರಿಷ್ಕರಿಸಬಹುದು ಮತ್ತು ಹುತಾತ್ಮರ ಬಲಿದಾನಗಳು ವ್ಯರ್ಥವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸೋಮವಾರ ನಕ್ಸಲರ ದಾಳಿ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ 38 ಸಿವಿಲ್ ಕಾಮಗಾರಿ ಗಳ ಗುತ್ತಿಗೆದಾರರಿದ್ದರು. ಅವರಿಗೆ ಯಾವುದೇ ಅಪಾಯವುಂಟಾಗಿಲ್ಲ. ಸಿಆರ್‌ಪಿಎಫ್ ಯೋಧರು ತಮ್ಮ ಪ್ರಾಣಗಳನ್ನು ಪಣವಾಗಿಟ್ಟು ಅವರನ್ನು ರಕ್ಷಿಸಿದ್ದಾರೆ ಎಂದು ಅವಸ್ಥಿ ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News