ಚೀನಾ : ಮಕ್ಕಳಿಗೆ ‘ಸದ್ದಾಂ’, ‘ಜಿಹಾದ್’ ಹೆಸರು ನಿಷೇಧ

Update: 2017-04-25 14:02 GMT

ಬೀಜಿಂಗ್, ಎ. 25: ಚೀನಾದ ಮುಸ್ಲಿಮ್ ಬಾಹುಳ್ಯದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಮಕ್ಕಳಿಗೆ ‘ಸದ್ದಾಂ’ ಮತ್ತು ‘ಜಿಹಾದ್’ ಸೇರಿದಂತೆ ಹಲವಾರು ಹೆಸರುಗಳನ್ನು ಇಡುವುದನ್ನು ಚೀನಾ ನಿಷೇಧಿಸಿದೆ.

ಇಂಥ ಹೆಸರಿರುವ ಮಕ್ಕಳು ಶಿಕ್ಷಣ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ.

ಜಗತ್ತಿನಾದ್ಯಂತ ಮುಸ್ಲಿಮರು ಸಾಮಾನ್ಯವಾಗಿ ಹೊಂದಿರುವ ಹಾಗೂ ಧಾರ್ಮಿಕ ಹಿನ್ನೆಲೆ ಇರುವ ಡಝನ್‌ಗಟ್ಟಳೆ ಹೆಸರುಗಳನ್ನು ಕ್ಸಿನ್‌ಜಿಯಾಂಗ್ ಅಧಿಕಾರಿಗಳು ಇತ್ತೀಚೆಗೆ ನಿಷೇಧಿಸಿದ್ದಾರೆ ಎಂದು ಅದು ತಿಳಿಸಿದೆ. ಈ ಹೆಸರುಗಳು ಜನರಲ್ಲಿ ‘ಧಾರ್ಮಿಕ ಭಾವನೆಯನ್ನು ಅತಿಶಯಗೊಳಿಸಬಹುದು’ ಎನ್ನುವ ಕಾರಣಕ್ಕಾಗಿ ಸರಕಾರ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಇಸ್ಲಾಮ್, ಕುರ್‌ಆನ್, ಮಕ್ಕಾ, ಜಿಹಾದ್, ಇಮಾಮ್, ಸದ್ದಾಮ್, ಹಜ್ಜ್ ಮತ್ತು ಮದೀನಾ ಮುಂತಾದ ಹೆಸರುಗಳು ನಿಷೇಧಿಸಲ್ಪಟ್ಟ ಮಕ್ಕಳ ಹೆಸರುಗಳ ಪಟ್ಟಿಯಲ್ಲಿ ಸೇರಿವೆ.

ನಿಷೇಧಿತ ಹೆಸರುಗಳನ್ನು ಹೊಂದಿರುವ ಮಕ್ಕಳಿಗೆ ಮನೆ ನೋಂದಣಿಯನ್ನು ಮಾಡಿಕೊಡಲಾಗುವುದಿಲ್ಲ. ಇದು ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆಯಲು ಹಾಗೂ ಇತರ ಸಾಮಾಜಿಕ ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿದೆ.

ಈ ಪ್ರಾಂತದಲ್ಲಿ ಸುಮಾರು ಒಂದು ಕೋಟಿ ಮುಸ್ಲಿಮ್ ಉಯ್ಘುರ್ ಅಲ್ಪಸಂಖ್ಯಾತ ಸಮುದಾಯದ ಜನರು ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News