ಇಸ್ರೇಲ್ ಜೈಲುಗಳಲ್ಲಿ ಫೆಲೆಸ್ತೀನ್ ಕೈದಿಗಳ ಉಪವಾಸ ಸತ್ಯಾಗ್ರಹ ; ನಾಯಕನ ಸ್ಥಿತಿ ಗಂಭೀರ: ಎನ್‌ಜಿಒ

Update: 2017-04-25 14:41 GMT

ರಮಲ್ಲಾ (ಫೆಲೆಸ್ತೀನ್), ಎ. 25: ಇಸ್ರೇಲ್‌ನ ಜೈಲುಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಫೆಲೆಸ್ತೀನ್ ಕೈದಿಗಳ ನೇತೃತ್ವ ವಹಿಸಿರುವ ಮರ್ವನ್ ಬರ್ಘೌಟಿಯ ಆರೋಗ್ಯ ಕಳೆದ ವಾರದಿಂದ ಹದಗೆಟ್ಟಿದೆ ಎಂದು ‘ಫೆಲೆಸ್ತೀನ್ ಕೈದಿಗಳ ಕ್ಲಬ್’ ಎಂಬ ಹೆಸರಿನ ಎನ್‌ಜಿಒ ಸೋಮವಾರ ಹೇಳಿದೆ.

57 ವರ್ಷದ ಬರ್ಘೌಟಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಅದು ತಿಳಿಸಿದೆ.ಎರಡನೆ ಫೆಲೆಸ್ತೀನ್ ಸಂಘರ್ಷದಲ್ಲಿ ವಹಿಸಿರುವ ಪಾತ್ರಕ್ಕಾಗಿ ಅವರು ಐದು ಜೀವಾವಧಿ ಶಿಕ್ಷೆಗಳನ್ನು ಅನುಭವಿಸುತ್ತಿದ್ದಾರೆ.ಉಪವಾಸ ಸತ್ಯಾಗ್ರಹದಿಂದ ನಾಯಕನ ಆರೋಗ್ಯವು ಗಂಭೀರವಾಗಿ ಕ್ಷೀಣಿಸುತ್ತಿದೆ ಎಂದು ಎನ್‌ಜಿಒದ ಪದಾಧಿಕಾರಿ ಅಮನಿ ಸಾರಾನೆಹ್ ಹೇಳಿದರು.

ಉಪವಾಸವು ಎಪ್ರಿಲ್ 17ರಂದು ಆರಂಭಗೊಂಡಿದೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವವರು ನೀರು ಮತ್ತು ಉಪ್ಪನ್ನು ಮಾತ್ರ ಸೇವಿಸುತ್ತಿದ್ದಾರೆ.
ಉತ್ತಮ ವೈದ್ಯಕೀಯ ಆರೈಕೆ ಹಾಗೂ ಕುಟುಂಬ ಸದಸ್ಯರೊಡನೆ ಮಾತನಾಡಲು ಫೋನ್ ಸಂಪರ್ಕ ಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಅವರು ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.ಆದಾಗ್ಯೂ, ಬರ್ಘೌಟಿಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಕ್ಷೀಣತೆ ಗೋಚರಿಸಿಲ್ಲ ಎಂದು ಇಸ್ರೇಲ್ ಬಂದೀಖಾನೆ ಇಲಾಖೆಯ ವಕ್ತಾರರೋರ್ವರು ಹೇಳಿದರು.

 ‘‘ಬರ್ಘೌಟಿಗೆ ಸೌಖ್ಯವಿಲ್ಲ ಎಂದಾದರೆ, ಅವರು ತಿನ್ನಬೇಕು, ಅಷ್ಟೆ’’ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.ಸತ್ಯಾಗ್ರಹ ಆರಂಭಗೊಂಡ ಬಳಿಕ ಬರ್ಘೌಟಿಯನ್ನು ಜಲಮೆ ಜೈಲಿಗೆ ಸ್ಥಳಾಂತರಿಸಿ ಏಕಾಂಗಿಯಾಗಿ ಇರಿಸಲಾಗಿದೆ.ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಜೈಲಿನ ಅಧಿಕಾರಿಗಳು ಬರ್ಘೌಟಿಯನ್ನು ಒತ್ತಾಯಿಸುತ್ತಿದ್ದಾರೆ ಹಾಗೂ ಅವರ ಮನವೊಲಿಸುವಂತೆ ಇತರ ಕೈದಿಗಳನ್ನೂ ಒತ್ತಾಯಿಸುತ್ತಿದ್ದಾರೆ ಎಂದು ಎನ್‌ಜಿಒ ತಿಳಿಸಿದೆ.

ಇಸ್ರೇಲ್‌ನ ಜೈಲುಗಳಲ್ಲಿ ಸುಮಾರು 6,500 ಫೆಲೆಸ್ತೀನೀಯರಿದ್ದಾರೆ. ಇಸ್ರೇಲ್‌ನ ಆಡಳಿತಾತ್ಮಕ ಬಂಧನ ವ್ಯವಸ್ಥೆಯಡಿ ಸುಮಾರು 500 ಮಂದಿಯನ್ನು ಬಂಧಿಸಲಾಗಿದೆ. ಈ ಕಾನೂನಿನ ಪ್ರಕಾರ ಬಂಧಿಸಿದರೆ, ಕೈದಿಗಳನ್ನು ಆರೋಪವಿಲ್ಲದೆ ಜೈಲಿನಲ್ಲಿಡಬಹುದಾಗಿದೆ.

2000ದಿಂದ 2005ರವರೆಗೆ ನಡೆದ ಎರಡನೆ ಫೆಲೆಸ್ತೀನ್ ಸಂಘರ್ಷದ ವೇಳೆ ಬರ್ಘೌಟಿ ಪ್ರಧಾನ ಪಾತ್ರ ವಹಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಹಲವಾರು ಆತ್ಮಹತ್ಯಾ ದಾಳಿಗಳ ಉಸ್ತುವಾರಿಯನ್ನು ಬರ್ಘೌಟಿ ಹೊಂದಿದ್ದರು ಎಂಬುದಾಗಿ ಇಸ್ರೇಲ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News