ಪೇಜಾವರ ಶ್ರೀಗಳ ಹೇಳಿಕೆಗೆ ಸಿಪಿಎಂ ವಿಷಾದ

Update: 2017-04-25 14:54 GMT

ಉಡುಪಿ, ಎ.25: 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್. ಕೆ.ಅಡ್ವಾಣಿ, ಉಮಾಭಾರತಿ ಮೊದಲಾದವರು ತಪ್ಪಿತಸ್ಥರಲ್ಲ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹೇಳಿರುವುದು ವಿಷಾದನೀಯ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.

ಬ್ರಿಟಿಷರ ವಿರುದ್ದ ಹೋರಾಡಿದ ಭಾರತದ ಜನತೆ, 1950ರ ಜನವರಿ 26ರಂದು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನವನ್ನು ಅಂಗೀಕರಿಸಿದೆ. ಈ ಸಂವಿಧಾನದಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶವಿದೆ. ಯಾವುದೇ ಧರ್ಮ ಶ್ರೇಷ್ಟ ಎಂಬುದಾಗಲೀ, ಇತರ ಧರ್ಮದವರು 2ನೇ ದರ್ಜೆ ನಾಗರಿಕರು ಎಂಬುದಾಗಲೀ ಇಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸಲ್ಮಾನರೂ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅಂತಹ ಸ್ವಾತಂತ್ರ್ಯದ ಆಶಯವನ್ನು ಉಳಿಸಿ ಬೆಳೆಸಬೇಕು ಎಂದು ಸಿಪಿಎಂ ಹೇಳಿದೆ.

ರಾಮಮಂದಿರ ಕಟ್ಟುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಕೋರ್ಟಿನ ತೀರ್ಮಾನದಂತೆ ಆಗಬೇಕು. ಈ ದೇಶದ ಸಂವಿಧಾನದಂತೆ ನಡೆಯಬೇಕು. ಜ್ಞಾನಿಗಳಾದ ಪೇಜಾವರಶ್ರೀ ಬಾಬರಿ ಮಸೀದಿ ಧ್ವಂಸವನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಸಿದ್ದು ಆಘಾತಕಾರಿ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದು ಸಿಪಿಎಂ ಬಣ್ಣಿಸಿದೆ.

ಆಘಾತಕ್ಕೆ ಒಳಗಾಗಿರುವ ಸಮುದಾಯವನ್ನು ಇನ್ನಷ್ಟು ಆತಂಕಕ್ಕೆ ಒಳಪಡಿಸುವುದರ ಬದಲಾಗಿ ಆ ಸಮುದಾಯಕ್ಕೆ ಸ್ಥೈರ್ಯ, ಧೈರ್ಯ ತುಂಬಿಸುವ ಕೆಲಸ ಆಗಬೇಕಾಗಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News