ಪಾವೂರು ಗ್ರಾಮದ ಉಳಿಯಕ್ಕೆ ತೂಗು ಸೇತುವೆಯ ಬೇಡಿಕೆ: ಸಹ್ಯಾದ್ರಿ ವಿದ್ಯಾರ್ಥಿಗಳ ಸಾಥ್

Update: 2017-04-25 15:19 GMT

ಮಂಗಳೂರು, ಎ.25: ಪಾವೂರು ಗ್ರಾಮದ ‘ಉಳಿಯ’ ದ್ವೀಪದಲ್ಲಿ ಸುಮಾರು 35ಕ್ಕೂ ಅಧಿಕ ಕ್ರೈಸ್ತ ಸಮುದಾಯದ ಮನೆಗಳಿದ್ದು, ಸುಮಾರು 250 ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಕಳೆದ ಹಲವು ವರ್ಷದಿಂದ ತೂಗು ಸೇತುವೆಯ ಬೇಡಿಕೆಯನ್ನು ಮುಂದಿಟ್ಟಿದ್ದು, ಇದೀಗ ಇವರಿಗೆ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.

ಅಂದರೆ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ಟ್ರಿಗಾನ್’ ಎಂಬ ವಿಶೇಷ ತಂಡ ರಚಿಸಿ ‘ಪಾವೂರು ಉಳಿಯ’ ದ್ವೀಪದ ಅಭಿವೃದ್ಧಿಗೆ ಪಣತೊಟ್ಟಿದೆ. ಮುಂದಿನ 5 ವರ್ಷದೊಳಗೆ ಸ್ವಚ್ಛ ಪರಿಸರ ನಿರ್ಮಾಣ, ತೂಗು ಸೇತುವೆ ನಿರ್ಮಾಣ ಹಾಗೂ ಶುದ್ಧ ನೀರಿನ ಘಟಕ ನಿರ್ಮಾಣದ ಕನಸು ಕಂಡಿದೆ.

ಇಲ್ಲಿನ ನಿವಾಸಿಗಳು ಈ ದ್ವೀಪದಿಂದ ಹೊರ ಬರಲು ದೋಣಿಯನ್ನು ಅವಲಂಬಿಸಿದ್ದಾರೆ. ಮಳೆಗಾಲ ಹೊರತುಪಡಿಸಿ ನದಿ ನೀರಿಗೆ ಗಾಳಿ ಮರದ ಗುರ್ಜಿ ಮತ್ತು ಹಲಗೆಯನ್ನು ಒತ್ತೊತ್ತಾಗಿ ಕಟ್ಟಿ ಸಂಪರ್ಕ ಸಾಧಿಸಲು (ರಾ.ಹೆ.77ರ ಅಡ್ಯಾರ್ ಹತ್ತಿರ) ಪ್ರಯತ್ನಿಸುವುದು ಇಲ್ಲಿನ ಜನರ ವಾಡಿಕೆ.
ಜಗತ್ತು ಆಧುನೀಕರಣಗೊಳ್ಳುತ್ತಲೇ ಈ ದ್ವೀಪದ ಜನರು ಹೊರಜಗತ್ತಿನಲ್ಲಿ ನೆಲೆಸಲು ಹಾತೊರೆಯುವುದು ಸಹಜವಾಗಿದೆ. ಅದಕ್ಕೆ ಮುನ್ನುಡಿ ಎಂಬಂತೆ ಇಲ್ಲಿನ ಸರಕಾರಿ ಶಾಲೆಯೊಂದು ಈಗಾಗಲೆ ಮುಚ್ಚಿದೆ. ಇಲ್ಲಿನ ಜನರ ಸಮಸ್ಯೆ ಒಂದೆರಡಲ್ಲ. ಗರ್ಭಿಣಿಯರಿಂದ ಹಿಡಿದು ಎಳೆಯ ಮಕ್ಕಳು, ವೃದ್ಧರು ತುರ್ತು ಸಂದರ್ಭದಲ್ಲಿ ಹೊರಗೆ ಹೋಗಲು ಅಥವಾ ಅನಾರೋಗ್ಯ ಸಂದರ್ಭ ಇವರನ್ನು ಚಿಕಿತ್ಸೆಗೆ ಕರೆದೊಯ್ಯಲು ಪಡುವ ಕಷ್ಟ ಹೇಳತೀರದು. ಇದೀಗ ಇಲ್ಲಿನ ನಿವಾಸಿಗಳ ಬೇಡಿಕೆಗೆ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ನಮ್ಮ ಈ ಕನಸಿಗೆ ಸಾರ್ವಜನಿಕರ ಸಹಕಾರ ಬೇಕು. ಅದಕ್ಕಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಪೇಜ್‌ವೊಂದನ್ನು ತೆರೆದಿದ್ದೇವೆ. ಐದು ವರ್ಷದೊಳಗೆ ಈ ಪ್ರದೇಶವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ನಾವೀಗ ಈ ದ್ವೀಪಕ್ಕೆ ‘ಒರಿಯೊ ದ್ವೀಪ’ ಎಂದು ನಾಮಕರಣ ಮಾಡಿದ್ದೇವೆ ಎನ್ನುತ್ತಾರೆ ‘ಟ್ರಿಗಾನ್’ ತಂಡದ ನಾಯಕ ಅಲಿಸ್ಟರ್ ಸುಜಿತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News