​ಕುಡಿಯುವ ನೀರಿನ ನಿರಂತರ ಪೂರೈಕೆಗೆ ಒತ್ತಾಯಿಸಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

Update: 2017-04-25 15:27 GMT

ಸುರತ್ಕಲ್, ಎ.25: ಸುರತ್ಕಲ್ ಪ್ರದೇಶದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ತೀವ್ರ ಸಮಸ್ಯೆ ತಲೆದೋರಿದೆ. ರೇಶನಿಂಗ್ ಪದ್ಧತಿಯಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಒತ್ತಾಯಿಸಿ, ನೀರಿನ ಕೃತಕ ಅಭಾವ ಸೃಷ್ಟಿಸಿದ ನಗರಪಾಲಿಕೆಯ ನೀತಿಯನ್ನು ವಿರೋಧಿಸಿ ಡಿವೈಎಫ್‌ಐ ಸುರತ್ಕಲ್ ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾಲಿ ಕೊಡ ಪ್ರದರ್ಶಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ಮೇಯರ್‌ರ ಸರ್ವಾಧಿಕಾರಿ ಧೋರಣೆಯಿಂದ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ಕೂಡಲೇ ನಗರಾಡಳಿತ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಮುನೀರ್, ನೀರಿನ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಪುಷ್ಪಾಎಂ., ಡಿವೈಎಫ್‌ಐ ನಗರ ಉತ್ತರ ಸಮಿತಿ ಉಪಾಧ್ಯಕ್ಷ ಶ್ರೀನಾಥ್‌ಕುಲಾಲ್, ಸುರತ್ಕಲ್ ಘಟಕ ಅಧ್ಯಕ್ಷ ಅಜ್ಮಲ್ ಅಹ್ಮದ್, ಕಾರ್ಯದರ್ಶಿ ಬಿ.ಕೆ. ಮಕ್ಸೂದ್, ಐ.ಮುಹಮ್ಮದ್ ,ನಾಸಿರ್ ಕಾನ, ಸಲಿಂ ಶ್ಯಾಡೋ, ಹಮೀದ್ ತಣ್ಣೀರುಬಾವಿ, ಖಾಲಿದ್ ಕಾನ, ಅನ್ವರ್ ಕೃಷ್ಣಾಪುರ, ಮುನೀಬ್ ಕ್ರಷ್ಣಾಪುರ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು. ನೂರಾರು ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News