ಮಣಿಪಾಲ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗೆ ದಾಳಿ

Update: 2017-04-25 16:28 GMT

ಉಡುಪಿ, ಎ.25: ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ, ಆಹಾರ ಭದ್ರತೆ ಮತ್ತು ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳ ತಂಡವೊಂದು ಮಂಗಳವಾರ ಮಣಿಪಾಲ ನಗರದ ಟೈಗರ್ ಸರ್ಕಲ್, ಮಣಿಪಾಲ ಅಲೆವೂರು ರಸ್ತೆ ಹಾಗೂ ಎಂಐಟಿ ಕಾಲೇಜು ಎದುರಿನ ಅಂಗಡಿ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿದೆ.

ತಂಡವು ಕೊಟ್ಪಾ ಕಾಯ್ದೆಯಡಿಯಲ್ಲಿ 36 ಪ್ರಕರಣಗಳನ್ನು ದಾಖಲಿಸಿ 7,200 ರೂ. ದಂಡ ವಸೂಲಿ ಮಾಡಿದೆ. ಆಹಾರ ಸುರಕ್ಷತೆ ಅಡಿಯಲ್ಲಿ 25 ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 11 ಅಂಗಡಿಗಳಿಗೆ ನೋಟಿಸ್ ನೀಡಲಾಯಿತು. ನಿಷೇಧಿತ 101 ಟ್ಯೂಬ್ ಸುಣ್ಣ , 20 ಪ್ಯಾಕೆಟ್ (ಸಾಚೆಟ್) ಸುಣ್ಣ ವಶಪಡಿಸಿಕೊಳ್ಳಲಾಯಿತು.

ದಾಳಿಯು ಉಡುಪಿ ಜಿಲ್ಲೆಯನ್ನು ಕೊಟ್ಪಾ ಉನ್ನತ ಅನುಷ್ಠಾನ ಜಿಲ್ಲೆ ಎಂದು ಮೇ 31 (ವಿಶ್ವ ತಂಬಾಕು ವಿರೋಧಿ ದಿನಾಚರಣೆ ) ರೊಳಗೆ ಘೋಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಿರಂತರ ದಾಳಿ ಕೈಗೊಳ್ಳ ಲಾಗುತ್ತಿದೆ. ವ್ಯಾಪಾರಸ್ಥರು ಕೊಟ್ಪಾ ಕಾಯ್ದೆಯ ಸೆಕ್ಷನ್4 ಮತ್ತು ಸೆಕ್ಷನ್ 6ಎ ನಾಮಫಲಕಗಳನ್ನು ಕಡ್ಡಾಯವಾಗಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕು ಹಾಗೂ ಸೆಕ್ಷನ್ 6ಬಿ ಯಂತೆ ಶಿಕ್ಷಣ ಸಂಸ್ಥೆಯಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಸ್ಥಗಿತಗೊಳಿಸಬೇಕೆಂದು ಸೂಚಿಸಲಾಗಿದೆ.

ಇಂದಿನ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ , ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಂತೇಶ್ ಉಳ್ಳಾಗಡ್ಡಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ್, ಆಹಾರ ಸುರಕ್ಷತೆ ಅಧಿಕಾರಿ ವೆಂಕಟೇಶ್, ಶಿಕ್ಷಣ ಇಲಾಖೆಯ ಭುಜಂಗ ಶೆಟ್ಟಿ, ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟೇಗಾರ್ ಮತ್ತು ಮಣಿಪಾಲ ಪೊಲೀಸ್ ಠಾಣೆಯ ಉದಯ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News