ಖುರೇಷಿಯ ಭೇಟಿಗೆ ಕುಟುಂಬಕ್ಕೆ ಅವಕಾಶ: ಜೈಲು ಅಧಿಕಾರಿಗೆ ನ್ಯಾಯಾಲಯ ನಿರ್ದೇಶನ

Update: 2017-04-25 16:51 GMT

ಮಂಗಳೂರು, ಎ. 25: ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಷಿಯೊಂದಿಗೆ ಮಾತನಾಡಲು ಆತನ ಕುಟುಂಬಕ್ಕೆ ಅವಕಾಶ ನೀಡಬೇಕೆಂದು ಮಂಗಳೂರಿಗೆ 2ನೆ ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಅಧಿಕಾರಿಗೆ ಮಂಗಳವಾರ ನಿರ್ದೇಶನ ನೀಡಿದೆ.

ಆರೋಪಿ ಅಹ್ಮದ್ ಖುರೇಷಿಯನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಸಹಿತ ಯಾರಿಗೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಆತನ ಕುಟುಂಬದವರಿಗಾದರೂ ಭೇಟಿಯಾಗಲು ಅವಕಾಶ ನೀಡಬೇಕೆಂದು ಖುರೇಷಿ ಪರವಾಗಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಖುರೇಶಿಯನ್ನು ಮಾತನಾಡಿಸಲು ಆತನ ಕುಟುಂಬಸ್ಥರು ಬಂದಿದ್ದರೂ ಪೊಲೀಸರು ಅವಕಾಶ ನೀಡದೆ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬರುವಂತೆ ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮಂಗಳವಾರ ನ್ಯಾಯಾಲಯ ಖುರೇಷಿಯ ಕುಟುಂಬಕ್ಕೆ ಭೇಟಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದೆ. ಆದೇಶದ ಪ್ರತಿಯನ್ನು ನ್ಯಾಯಾಲಯವೇ ಜೈಲಿಗೆ ಕಳುಹಿಸಿದೆ ಎಂದು ಉಳೇಪಾಡಿ ತಿಳಿಸಿದ್ದಾರೆ.

ಸಿಐಡಿ ವಿಚಾರಣೆ: ಸಿಐಡಿ ಎಸ್ಪಿ ಸಿರಿ ಗೌರಿ ನೇತೃತ್ವದ ಮೂವರು ಅಧಿಕಾರಿಗಳ ತಂಡವು ನಗರದಲ್ಲಿ ಖುರೇಷಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News