ಕೃಷಿ ಆದಾಯದ ಮೇಲೂ ತೆರಿಗೆ ಬರೆ

Update: 2017-04-26 03:42 GMT

ಹೊಸದಿಲ್ಲಿ, ಎ.26: ದೇಶದಲ್ಲಿ ತೆರಿಗೆ ಮೂಲ ವಿಸ್ತರಿಸುವ ಹಾಗೂ ತೆರಿಗೆಗಳ್ಳತನಕ್ಕೆ ಕಡಿವಾಣ ಹಾಕುವ ಸಲುವಾಗಿ ಕೃಷಿ ಆದಾಯದ ಮೇಲೂ ತೆರಿಗೆ ವಿಧಿಸುವ ಪ್ರಸ್ತಾವಕ್ಕೆ ಕೇಂದ್ರದ ನೀತಿ ಆಯೋಗ ಒಪ್ಪಿಗೆಯ ಮುದ್ರೆ ಒತ್ತಿದೆ. ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಕೃಷಿ ಆದಾಯಕ್ಕೆ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ.

ಕೃಷಿ ಉತ್ತೇಜನದ ಸಲುವಾಗಿ ಕೃಷಿ ಆದಾಯಕ್ಕೆ ತೆರಿಗೆ ವಿಧಿಸಬಾರದು ಎಂಬ ಅಭಿಪ್ರಾಯವನ್ನು ಆಯೋಗದ ಕೆಲ ಸದಸ್ಯರು ವ್ಯಕ್ತಪಡಿಸಿದ್ದಾರೆ. ಆದರೆ ಕೃಷಿಕರಲ್ಲದವರೂ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಆದಾಯದ ಮೂಲವನ್ನು ಕೃಷಿ ಆದಾಯ ಎಂದು ಬಿಂಬಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗದಿತ ಆದಾಯಕ್ಕಿಂತ ಹೆಚ್ಚಿನ ಕೃಷಿ ಆದಾಯಕ್ಕೆ ತೆರಿಗೆ ವಿಧಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಸೋವಿಯತ್ ಶೈಲಿಯ ಪಂಚವಾರ್ಷಿಕ ಯೋಜನೆ ಬದಲಾಗಿ ಕರಡು ಮೂರು ವರ್ಷಗಳ ಕಾರ್ಯಸೂಚಿಯನ್ನು ಜಾರಿಗೆ ತರುವ ನಿರ್ಧಾರವನ್ನು ಪ್ರಕಟಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ವಿವೇಕ್ ದೇವರಾಯ್ ಇದನ್ನು ಒಪ್ಪಿಕೊಂಡರು. ತೆರಿಗೆ ಸುಧಾರಣೆ ಮತ್ತು ಸರಳೀಕರಣ ಪ್ರಕ್ರಿಯೆ ಅಂಗವಾಗಿ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಮೂರರಿಂದ ಐದು ವರ್ಷಗಳ ಸರಾಸರಿ ಕೃಷಿ ಆದಾಯವನ್ನು ಲೆಕ್ಕಹಾಕಿ, ತೆರಿಗೆಯಿಂದ ವಿನಾಯ್ತಿ ನೀಡುವ ಗರಿಷ್ಠ ಮೊತ್ತವನ್ನು ನಿರ್ಧರಿಸಲಾಗುವುದು. ಆದರೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಏಕರೂಪದ ಆದಾಯ ಮಟ್ಟ ನಿಗದಿಯಾಗುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News