ಉಪ್ಪಿನಂಗಡಿಯಲ್ಲಿ ‘ಶಿಕ್ಷಣದ ಕಡೆಗೆ ಚಿಣ್ಣರ ನಡಿಗೆ’

Update: 2017-04-26 05:49 GMT

ಉಪ್ಪಿನಂಗಡಿ, ಎ.26: ಶಿಕ್ಷಣ ಹಕ್ಕು ಕಾಯ್ದೆ, ಅನುತ್ತೀರ್ಣ ಇಲ್ಲ ಕಾಯ್ದೆ ಹಾಗೂ ಶಿಕ್ಷಣದ ವ್ಯಾಪಾರೀಕರಣವನ್ನು ವಿರೋಧಿಸಿ ಹಾಗೂ ಸಾರ್ವಜನಿರಲ್ಲಿ ಜನಜಾಗೃತಿ ಮೂಡಿಸಲು ಉಪ್ಪಿನಂಗಡಿಯಲ್ಲಿಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್. ಐ.ಒ.) ವತಿಯಿಂದ ಬೇಸಿಗೆ ಶಿಬಿರದ ಹಿನ್ನೆಲೆಯಲ್ಲಿ ‘ಶಿಕ್ಷಣದ ಕಡೆಗೆ ಚಿಣ್ಣರ ನಡಿಗೆ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಎಸ್.ಐ.ಓ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಆರ್.ಟಿ.ಇ. ಕಾಜಾರಿಗೆ ಬಂದು 8 ವರ್ಷವಾಗುತ್ತಿದ್ದರೂ ಕೂಡ ಸರಿಯಾದ ಹಾಗೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ದೇಶಾದ್ಯಂತ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಮುಚ್ಚಿಸುವ ಮೂಲಕ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡುತ್ತಿರುವುದು ಖೇದಕರ. ಆರ್.ಟಿ.ಇ. ಕಾಯ್ದೆಯಲ್ಲಿ 39 ವಿವಿಧ ಅಂಶಗಳಿದ್ದರೂ ಕೂಡ ಅವುಗಳ ಕಡೆಗೆ ಗಮನ ಕೊಡದೆ ಕೇವಲ 25 ಶೇ. ಸೀಟು ನೀಡುತ್ತಿರುವ ವಿಷಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವುದು ವಿಷಾದನೀಯ ಎಂದರು.

ಸರಕಾರವು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸುತ್ತಿಲ್ಲ. ಇದೇ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಆಸಕ್ತಿ ವಹಿಸುತ್ತಿಲ್ಲ. ಆಟದ ಮೈದಾನ, ಪ್ರಯೋಗಾಲಯ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಸರಕಾರಿ ಶಾಲೆಗಳಿಗೆ ಕಲ್ಪಿಸಬೇಕಾದುದು ಇಂದಿನ ಅಗತ್ಯ. ಅಲ್ಲದೇ, ಖಾಸಗಿ ಶಾಲೆಗಳಲ್ಲಿ ಮಿತಿಮೀರಿರು ಡೊನೇಷನ್ ಹಾವಳಿಯನ್ನು ಸರಕಾರ ತಡೆಗಟ್ಟಬೇಕಾಗಿದೆ ಎಂದು ತಲ್ಹಾ ಇಸ್ಮಾಯೀಲ್ ಆಗ್ರಹಿಸಿದರು.

ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದಿಂದ ಆರಂಭಿಸಲಾದ ನಡಿಗೆ ಹೊಸ ಬಸ್ ನಿಲ್ದಾಣದ ಮೂಲಕ, ಶೆಣೈ ಹಾಸ್ಪಿಟಲ್ ದಾರಿಯಾಗಿ ಮರಳಿ ಹಳೆ ಬಸ್ ನಿಲ್ದಾಣದಲ್ಲಿ ಸಮಾರೋಪ ಮಾಡಲಾಯಿತು.

 ಈ ಸಂದರ್ಭ ಉಪ್ಪಿನಂಗಡಿ ಎಸ್.ಐ.ಒ. ಅಧ್ಯಕ್ಷ ಅಸ್ಲಂ ಪಂಜಲ, ಜಿಲ್ಲಾ ಕಾರ್ಯದರ್ಶಿ ಬಾಸಿತ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News