ಜನಾಂಗೀಯ ನಿಂದನೆ: ಜೆಟ್ ಏರ್‌ವೇಸ್ ಪೈಲಟ್‌ಗೆ ಹರ್ಭಜನ್ ಸಿಂಗ್ ತರಾಟೆ

Update: 2017-04-26 10:48 GMT

ಹೊಸದಿಲ್ಲಿ,ಎ.26: ಜೆಟ್ ಏರ್‌ವೇಸ್‌ನ ಪೈಲಟ್‌ನೋರ್ವ ಜನಾಂಗೀಯ ದ್ವೇಷಿ ಎಂದು ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಆರೋಪಿಸಿದ್ದಾರೆ. ಈ ಪೈಲಟ್ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಅಂಗವಿಕಲ ವ್ಯಕ್ತಿಯೋರ್ವನನ್ನು ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಅವರು ದೂರಿದ್ದಾರೆ.

 ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಸಿಂಗ್ ಬುಧವಾರ ಜೆಟ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಇಂತಹುದೊಂದು ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದರು. ಪೈಲಟ್ ಸಿಬ್ಬಂದಿಗಳ ಪೈಕಿ ಓರ್ವ ಕೆಲವು ಪ್ರಯಾಣಿಕರೊಂದಿಗೆ ಜನಾಂಗೀಯ ದ್ವೇಷವನ್ನು ಪ್ರದರ್ಶಿಸಿದ್ದ.

ಪೈಲಟ್ ವರ್ತನೆ ತುಂಬ ಕೆಟ್ಟದಾಗಿತ್ತು ಎಂದು ಬಣ್ಣಿಸಿರುವ ಅವರು, ಜೆಟ್ ಏರವೇಸ್‌ನ ಪೈಲಟ್ ಬೆರ್ನಾಡ್ ಹೋಸ್ಲಿನ್ ಹೊಟ್ಟೆಪಾಡಿಗಾಗಿ ಇಲ್ಲಿ ಗಳಿಕೆ ಮಾಡುತ್ತಿದ್ದಾನಾದರೂ ನನ್ನ ಸಹ ಪ್ರಯಾಣಿಕನನ್ನು,‘‘ಬ್ಲಡಿ ಇಂಡಿಯನ್,ನನ್ನ ವಿಮಾನದಿಂದ ತೊಲಗು ’’ ಎಂದು ನಿಂದಿಸಿದ್ದಾನೆ ಎಂದು ಟ್ವೀಟಿಸಿದ್ದಾರೆ.

ಆರೋಪಿ ಪೈಲಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಂಗ್ ಮಾಡಿರುವ ಮೂರು ಟ್ವೀಟ್‌ಗಳು ಅವರ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಆತ ಜನಾಂಗೀಯವಾದಿ ಮಾತ್ರವಲ್ಲ, ಆತ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆಸಿದ್ದ. ಅಂಗವಿಕಲ ವ್ಯಕ್ತಿಯನ್ನು ಅವಾಚ್ಯವಾಗಿ ನಿಂದಿಸಿದ್ದ. ಇದು ಜೆಟ್ ಏರ್‌ವೇಸ್ ಪಾಲಿಗೆ ಅತ್ಯಂತ ನಾಚಿಕೆಗೇಡು ಎಂದಿದ್ದಾರೆ.

ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದಿರುವ ಸಿಂಗ್, ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲಕ್ಕೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News