ಹಿಂದೂ ಯುವಕನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಮರು

Update: 2017-04-26 12:31 GMT

ಮಾಲ್ಡಾ,ಎ.26: ಈ ದೇಶದ ಸಮುದಾಯಗಳ ನಡುವೆ ಒಡಕು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ದೇಶದ ಅತ್ಯಂತ ಬಡ ಮತ್ತು ಕುಖ್ಯಾತ ಜಿಲ್ಲೆಗಳಲ್ಲೊಂದಾಗಿರುವ ಪಶ್ಚಿಮ ಬಂಗಾಲದ ಮಾಲ್ಡಾದಲ್ಲಿ ಹಿಂದು ಯುವಕನೋರ್ವನ ಅಂತಿಮ ಯಾತ್ರೆ ಮತ್ತು ಅಂತ್ಯ ಸಂಸ್ಕಾರವು ಸಮುದಾಯಗಳ ನಡುವಿನ ಸಹಜ ಸೌಹಾರ್ದಕ್ಕೆ ಒಂದು ಉದಾಹರಣೆ ಯಾಗಿದೆ.

ಸೋಮವಾರ ಕೊನೆಯುಸಿರೆಳೆದಿದ್ದ ಬಿಸ್ವಜಿತ್ ರಜಕ್(35)ನ ಶವವನ್ನು ಮುಸ್ಲಿಂ ಯುವಕರ ಗುಂಪೊಂದು ಚಿತಾಗಾರಕ್ಕೆ ಸಾಗಿಸಿದ್ದಲ್ಲದೆ, ಹಿಂದು ಸಂಪ್ರದಾಯಕ್ಕನುಗುಣ ವಾಗಿ ಅಂತಿಮ ಯಾತ್ರೆಯುದ್ದಕ್ಕೂ ‘ಹರಿ ಬೋಲ್’ ಎಂದು ಪಠಿಸುತ್ತಲೇ ಸಾಗಿದ್ದರು. ಮೂರು ಕಿ.ಮೀ.ದೂರದ ಚಿತಾಗಾರಕ್ಕೆ ಬಿಸ್ವಜಿತ್ ರಜಕ್ ಶವವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತು ಸಾಗಿಸಿದ್ದ ಈ ಹುಡುಗರು ಸಮೀಪದ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮತ್ತು ಶವದಹನದ ಬಳಿಕ ನದಿಯಲ್ಲಿ ಮುಳುಗು ಹಾಕಿದ್ದು ಸೇರಿದಂತೆ ಅಂತ್ಯಸಂಸ್ಕಾರದ ಎಲ್ಲ ವಿಧಿಗಳನ್ನು ಹಿಂದು ಸಂಪ್ರದಾಯದಂತೆ ಚಾಚೂ ತಪ್ಪದೇ ನೆರವೇರಿಸಿದ್ದರು.

ಬಿಸ್ವಜಿತ್ ರಜಕ್ ಕುಟುಂಬಿಕರು ತೀರ ಬಡವರಾಗಿದ್ದು, ಅಂತ್ಯಸಂಸ್ಕಾರ ಮತ್ತು ಇತರ ಸಂಬಂಧಿತ ವಿಧಿಗಳನ್ನು ನೆರವೇರಿಸಲೂ ಅವರ ಬಳಿ ಹಣವಿರಲಿಲ್ಲ.

ಕೋಲ್ಕತಾದಿಂದ ಸುಮಾರು 350 ಕಿ.ಮೀ.ದೂರದ ಮಾಲ್ಡಾ ಜಿಲ್ಲೆಯ ಮಾನಿಕ್‌ಚಾಕ್ ಬ್ಲಾಕ್‌ನ ಶೇಖಪುರಾ ಗ್ರಾಮದಲ್ಲಿ ಈ ಮನ ಕಲಕುವ ಘಟನೆ ನಡೆದಿದೆ.

 ಯಕೃತ್ತಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಬಿಸ್ವಜಿತ್ ರಜಕ್ ಸೋಮವಾರ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದ. ಆದರೆ ಮಂಗಳವಾರ ಆತನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಗಳನ್ನು ಮಾಡಲು ಕುಟುಂಬಿಕರಿಗೆ ಸಾಧ್ಯವಾಗದಿದ್ದಾಗ ಅಲ್ಲಿ ಬಂದು ಸೇರಿದ ಗ್ರಾಮಸ್ಥರು ಬಿಸ್ವಜಿತ್ ರಜಕ್‌ನ ಅಂತ್ಯಸಂಸ್ಕಾರ ನೆರವೇರಿಸಲು ತಮಗೆ ಅನುಮತಿ ನೀಡುವಂತೆ ಆತನ ತಂದೆ ನಾಗೇನ್ ರಜಕ್‌ರನ್ನು ಕೋರಿಕೊಂಡಿದ್ದರು.

 ಸ್ಥಳೀಯ ಮಸೀದಿಯ ಮೌಲ್ವಿಯವರು ಕೂಡ ಚಿತಾಗಾರಕ್ಕೆ ತೆರಳಿದ್ದರು. ಅಂತ್ಯಸಂಸ್ಕಾರಕ್ಕೆ ಅಗತ್ಯವಿದ್ದ ಹಣವನ್ನು ನೆರೆಕರೆಯ ಮುಸ್ಲಿಮರೇ ಒಟ್ಟುಗೂಡಿಸಿದ್ದರು. ಸುಮಾರು 6,000 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಬಿಸ್ವಜಿತ್ ರಜಕ್ ಸೇರಿದಂತೆ ಎರಡೇ ಹಿಂದು ಕುಟುಂಬಗಳಿವೆ.

ಮಗನ ಶವವನ್ನು ಚಿತಾಗಾರಕ್ಕೆ ಸಾಗಿಸಲು ನನ್ನ ಬಳಿ ಹಣಬಲವೂ ಇರಲಿಲ್ಲ,ಜನಬಲವೂ ಇರಲಿಲ್ಲ. ಗ್ರಾಮಸ್ಥರು ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಮುಂದಾಗಿರದಿದ್ದರೆ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ ಎಂದು ನಾಗೇನ್ ಕಣ್ಣೀರು ಸುರಿಸುತ್ತಲೇ ಹೇಳಿದರು.

ಯಾವುದೇ ಧರ್ಮವೂ ಇತರರನ್ನು ದ್ವೇಷಿಸು ಎಂದು ಬೋಧಿಸುವುದಿಲ್ಲ. ಬಿಸ್ವಜಿತ್ ನಮ್ಮ ಸೋದರನಂತಿದ್ದ. ಆತನ ಕುಟುಂಬ ಬೇರೆ ಧರ್ಮಕ್ಕೆ ಸೇರಿದ್ದೆಂದುಕೊಂಡು ನಾವು ಸುಮ್ಮನಿದ್ದರೆ ಅಲ್ಲಾಹು ನಮ್ಮನ್ನು ಕ್ಷಮಿಸುತ್ತಿರಲಿಲ್ಲ. ಎಂದು ಬಿಸ್ವಜಿತ್ ರಜಕ್ ಅಂತ್ಯಸಂಸ್ಕಾರ ವ್ಯಸ್ಥೆಯ ನೇತೃತ್ವ ವಹಿಸಿದ್ದ ಹಾಜಿ ಅಬ್ದುಲ್ ಖಾಲಿಕ್ ಹೇಳಿದರು.

ಮೌಲ್ವಿ, ಹಾಜಿ ಮತ್ತು ಮುಸ್ಲಿಂ ಸಮುದಾಯದ ನೂರಾರು ಜನರು ಬಿಸ್ವಜಿತ್ ರಜಕ್ ಅಂತ್ಯಸಂಸ್ಕಾರವನ್ನು ಏರ್ಪಾಡು ಮಾಡಿದ್ದರು.ಇದು ಈ ದೇಶದಲ್ಲಿಯ ಹಿಂದು ಮತ್ತು ಮುಸ್ಲಿಮರ ನಡುವಿನ ಆದರ್ಶಪ್ರಾಯ ಭ್ರಾತೃತ್ವವನ್ನು ತೋರಿಸುತ್ತದೆ ಎಂದು ಮಾಲ್ಡಾ ಜಿಲ್ಲಾ ಪರಿಷದ್‌ನ ಸಹ ಸಭಾಧಿಪತಿ ಗೌರಚಂದ್ರ ಮಂಡಲ್ ಹೇಳಿದರು. ಮಂಡಲ್ ಅವರೂ ಚಿತಾಗಾರಕ್ಕೆ ತರಳಿದ್ದರು.

ಸಾಮಾನ್ಯ ಜನರು ನಿಜಕ್ಕೂ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ನೆರವು ನೀಡುವುದು ಮತ್ತು ಕೆಲವು ಹಿಂದು ಹೆಸರುಗಳನ್ನು ಪಠಿಸುವುದು ನನ್ನಿಂದ ನನ್ನ ಧರ್ಮವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಗ್ರಾಮಸ್ಥ ಆಯಿಶ್ ಅಲಿ ಹೇಳಿದರು.

ಬಿಸ್ವಜಿತ್ ರಜಕ್‌ನ ಮುಸ್ಲಿಂ ನೆರೆಕರೆಯವರು ಆತನ ಚಿಕಿತ್ಸೆಗೆ ಹಣ ನೀಡಿದ್ದರಲ್ಲದೇ, ಕೋಲ್ಕತಾದ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಬಿಸ್ವಜಿತ್ ರಜಕ್‌ಗೆ ಪತ್ನಿ ಮತ್ತು ಮೂವರು ಮಕ್ಕಳೂ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News