ಚೀನಾ: ಸ್ವದೇಶಿ ವಿಮಾನವಾಹಕ ನೌಕೆಗೆ ಚಾಲನೆ

Update: 2017-04-26 14:01 GMT

ಚೀನಾ, ಎ. 26: ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಪ್ರಥಮ ವಿಮಾನವಾಹಕ ನೌಕೆಗೆ ಚೀನಾ ಬುಧವಾರ ಚಾಲನೆ ನೀಡಿದೆ. ಇದರೊಂದಿಗೆ ಚೀನಾ ಹೊಂದಿರುವ ವಿಮಾನವಾಹಕ ನೌಕೆಗಳ ಸಂಖ್ಯೆ ಎರಡಕ್ಕೇರಿದೆ. ಅದು ಈಗಾಗಲೇ ಯುಕ್ರೇನ್‌ನಿಂದ ವಿಮಾನವಾಹಕ ನೌಕೆಯೊಂದನ್ನು ಖರೀದಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಲು ಚೀನಾ ಮುಂದಾದ ಬಳಿಕ ಈ ವಲಯದಲ್ಲಿ ಉದ್ವಿಗ್ನತೆ ಹೆಚ್ಚಿರುವಂತೆಯೇ, ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಚೀನಾ ಶಿಪ್‌ಬಿಲ್ಡಿಂಗ್ ಇಂಡಸ್ಟ್ರಿ ಕಾರ್ಪ್ (ಸಿಎಸ್‌ಐಸಿ)ಗೆ ಸೇರಿದ ದಲಿಯನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ 50,000 ಟನ್ ತೂಕದ ನೂತನ ನೌಕೆಯನ್ನು ಹಡಗುಕಟ್ಟೆಯಿಂದ ನೀರಿಗೆ ಸ್ಥಳಾಂತರಿಸಲಾಯಿತು.

ನೂತನ ನೌಕೆಯು ಚೀನಾ ಈಗಾಗಲೇ ಹೊಂದಿರುವ ‘ಲಿಯವೊನಿಂಗ್’ ವಿಮಾನವಾಹಕ ನೌಕೆಗಿಂತ ಹೆಚ್ಚು ಸುಧಾರಿತವಾಗಿದೆ ಹಾಗೂ ಹೆಚ್ಚು ಸಾಮರ್ಥ್ಯ ಹೊಂದಿದೆ. ಲಿಯವೊನಿಂಗ್ ನೌಕೆಯನ್ನು 25 ವರ್ಷಗಳ ಹಿಂದೆ ರಶ್ಯ ನಿರ್ಮಿಸಿದೆ. ಚೀನಾ ಅದನ್ನು ಯುಕ್ರೇನ್‌ನಿಂದ ಖರೀದಿಸಿದೆ.

ಚೀನಾವು ನೂತನ ವಿಮಾನವಾಹಕ ನೌಕೆಯ ನಿರ್ಮಾಣವನ್ನು 2013 ನವೆಂಬರ್‌ನಲ್ಲಿ ಆರಂಭಿಸಿತು. ಜೋಡಣೆ ಕಾರ್ಯ 2015 ಮಾರ್ಚ್‌ನಲ್ಲಿ ಆರಂಭವಾಯಿತು. ಆದಾಗ್ಯೂ, ನೌಕೆಯು 2020ರವರೆಗೆ ಸಕ್ರಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News