ಜಲೀಲ್ ಕರೋಪಾಡಿ ಹಂತಕರನ್ನು ಬಂಧಿಸದಿದ್ದರೆ ಪ್ರತಿಭಟನೆ: ಎಸ್‌ಡಿಪಿಐ ಎಚ್ಚರಿಕೆ
ಬಂಟ್ವಾಳ, ಎ. 26: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್‌ರನ್ನು ಕೊಲೆಗೈದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸದಿದ್ದರೆ ದ.ಕ. ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.
ಜಲೀಲ್‌ರ ಹತ್ಯೆ ನಡೆದು ಒಂದು ವಾರ ಕಳೆದರೂ ಈವರೆಗೆ ಹಂತಕರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದ್ದರೂ ಈ ಬಗ್ಗೆ ಪೊಲೀಸರು ಖಚಿತಪಡಿಸುತ್ತಿಲ್ಲ. ಇದರ ನಡುವೆ ಹಂತಕರನ್ನು ರಕ್ಷಿಸುವ ಹುನ್ನಾರ ಕೂಡಾ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡನನ್ನು ಹಾಡಹಗಲೇ ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲು ಪೊಲೀಸ್ ಇಲಾಖೆಗೆ ಒತ್ತಡ ಹಾಕುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಜಲೀಲ್ ಕರೋಪಾಡಿಯವರ ಹಂತಕರನ್ನು ರಕ್ಷಿಸುವ ಸಲುವಾಗಿ ಕಳ್ಳತನ ಮಾಡಿದ ಎರಡು ಬೈಕ್‌ಗಳನ್ನು ಮತ್ತು ಮಾರಕಾಯುಧಗಳನ್ನು ಪೊದೆಯಲ್ಲಿ ಎಸೆದು ತನಿಖೆಯ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ. ಕರೋಪಾಡಿಯಲ್ಲಿ ಬಾರ್ ಗೆ ಅನುಮತಿ ನಿರಾಕರಿಸಿದ ಕಾರಣಕ್ಕಾಗಿ ಸಂಘಪರಿವಾರದ ಗೂಂಡಾಗಳಿಗೆ ಹತ್ಯೆ ನಡೆಸಲು ಸುಪಾರಿ ನೀಡಲಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕೂಡಲೇ ಹಂತಕರನ್ನು ಬಂಧಿಸಿ ಅದರ ಹಿಂದಿರುವ ಎಲ್ಲ ಶಕ್ತಿಗಳನ್ನು ಬಯಲಿಗೆಳೆಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.