×
Ad

ಪಾಕ್ ವಿದೇಶ ಕಾರ್ಯದರ್ಶಿಗೆ ಭಾರತ ಮನವಿ

Update: 2017-04-26 19:47 IST

ಇಸ್ಲಾಮಾಬಾದ್, ಎ. 26: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಸಂಬಂಧಿಸಿ ಭಾರತ ಬುಧವಾರ ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ತೆಹ್ಮೀನಾ ಜಂಜುವರಿಗೆ ಮನವಿ ಸಲ್ಲಿಸಿದೆ. ಭಾರತೀಯ ಹೈಕಮಿಶನರ್ ಗೌತಮ್ ಬಂಬವಾಲೆ ಅವರು ಜಂಜುವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

‘‘ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಹೈಕಮಿಶನರ್ ಗೌತಮ್ ಬಂಬವಾಲೆ ಇಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ವಿದೇಶ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು’’ ಎಂದು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಶನ್ ಟ್ವೀಟ್ ಮಾಡಿದೆ.

ಜಾಧವ್‌ರನ್ನು ಬಲೂಚಿಸ್ತಾನದಲ್ಲಿ 2016 ಮಾರ್ಚ್‌ನಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಅವರು ಬಲೂಚಿಸ್ತಾನದಲ್ಲಿ ಗೂಢಚಾರಿಕೆ ನಡೆಸುತ್ತಿದ್ದರು ಎಂದು ಅದು ಆರೋಪಿಸಿದೆ. ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ಎಪ್ರಿಲ್ 10ರಂದು ಅವರಿಗೆ ಮರಣ ದಂಡನೆ ವಿಧಿಸಿತ್ತು.

ಅವರನ್ನು ಭೇಟಿ ಮಾಡಲು ಕಾನ್ಸುಲರ್ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಭಾರತ 15 ಬಾರಿ ಕೇಳಿಕೊಂಡಿದೆ. ಆದರೆ, ಈ ಅವಕಾಶವನ್ನು ನಿರಾಕರಿಸಲಾಗಿದೆ.ಜಾಧವ್ ಎಲ್ಲಿ ಹಾಗೂ ಪರಿಸ್ಥಿತಿಯಲ್ಲಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ನೀಡಲಾಗುತ್ತಿಲ್ಲ ಎಂದು ಭಾರತೀಯ ಅಧಿಕಾರಿಗಳು ದೂರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News