‘ಜಿಲ್ಲೆಯ ಜಲಕ್ಷಾಮಕ್ಕೆ ವಾರಾಹಿ ಯೋಜನೆ ವಿಫಲತೆಯೂ ಕಾರಣ’
ಉಡುಪಿ, ಎ.26: ಜಿಲ್ಲೆಯ ಜೀವನದಿಯಾದ ವಾರಾಹಿಯ ಕುಡಿಯುವ ನೀರು ಸರಬರಾಜು ಯೋಜನೆ ಪೂರ್ತಿಗೊಳಿಸುವಲ್ಲಿ ಉದ್ದೇಶ ಪೂರ್ವಕ ವಿಳಂಬ, ಕಳಪೆ ಮಟ್ಟದ ಕಾಮಗಾರಿ, ಭ್ರಷ್ಟಾಚಾರ, ಜನಪ್ರತಿನಿಧಿಗಳ ಸಂಶಯಾಸ್ಪದ ಮೌನದಿಂದಾಗಿ ಕೋಟ್ಯಾಂತರ ರೂ. ಖರ್ಚು ಮಾಡಿಯೂ ಮೂಲ ಉದ್ದೇಶ ಈಡೇರದ ಕಾರಣದಿಂದ ಜಿಲ್ಲೆಯಲ್ಲಿ ಜಲಕ್ಷಾಮ ಉಂಟಾಗಿದೆ ಎಂದು ತುಳುನಾಡು ಒಕ್ಕೂಟದ ಉಡುಪಿ ಜಿಲ್ಲಾ ಘಟಕ ಹೇಳಿದೆ.
ಈ ಕುರಿತಂತೆ ಎಲ್ಲಾ ರಾಜಕೀಯ ಪಕ್ಷಗಳು ಜಾಣ ಮೌನ ವಹಿಸಿರುವುದರಿಂದ 3 ದಶಕಗಳು ಕಳೆದರೂ ಈ ಯೋಜನೆ ಪೂರ್ಣಗೊಂಡಿಲ್ಲ. ಕೇವಲ 9 ಕೋಟಿ ರೂ. ಟೆಂಡರ್‌ನಲ್ಲಿ ಪ್ರಾರಂಭಗೊಂಡ ಯೋಜನೆ ಇಂದು 900 ಕೋಟಿ ರೂ. ಖರ್ಚಾದರೂ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿದೆ. ಕಳಪೆ ಕಾಮಗಾರಿಯೊಂದಿಗೆ ಜನರ ತೆರಿಗೆ ಹಣದ ದುರುಪಯೋಗದ ಬಹು ಕೋಟಿ ಹಗರಣ ಇದಾಗಿದೆ ಎಂದು ತುಳುನಾಡು ಒಕ್ಕೂಟದ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನದಾಸ್ ಶೆಟ್ಟಿ ಆರೋಪಿಸಿದ್ದಾರೆ.
35 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಯಾರೂ ಸೊಲ್ಲೆತ್ತುತ್ತಿಲ್ಲ. ಯಾವ ಕೃಷಿಕರಿಗೂ, ಯಾವ ಗ್ರಾಮಕ್ಕೂ ನಿರಂತರವಾಗಿ ನೀರು ಹರಿಯುತ್ತಿಲ್ಲ. ಉಡುಪಿ ನಗರದ ಜಲಕ್ಷಾಮ ವನ್ನು ನಿವಾರಿಸುವ ಕಾಮಗಾರಿಯನ್ನು ಒಳಗೊಂಡಿತ್ತಾದರೂ ಅದೂ ಕೂಡಾ ಈವರೆಗೂ ಈಡೇರಿಲ್ಲ ಎಂದರು.
ಅಧಿಕಾರಿಗಳು ಯಾವುದೆ ಮಾಹಿತಿಯನ್ನು ಯಾರಿಗೂ ನೀಡುತ್ತಿಲ್ಲ. ರೈತಾಪಿ ವರ್ಗದವರನ್ನು, ಜನರನ್ನು ಕತ್ತಲಲ್ಲಿಟ್ಟು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಕಾಮಗಾರಿ ವಿಳಂಬ ನೀತಿಯೇ ಭ್ರಷ್ಟಾಚಾರದ ಇನ್ನೊಂದು ಮುಖದಂತಿದೆ. ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಹಾಯಕವಾಗಿಬೇಕಿದ್ದ ನೀರಾವರಿ ಯೋಜನೆ, ಜಲ ವಿದ್ಯುತ್‌ಯೋಜನೆಗೆ ಸೀಮಿತಗೊಂಡಂತಿದೆ ಎಂದು ಚಿತ್ತರಂಜನ್‌ದಾಸ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.