×
Ad

ಬ್ರಿಟನ್ : ಭಾರತೀಯ ಉದ್ಯಮಿಗೆ ಮಹಾರಾಣಿ ಉದ್ಯಮಶೀಲತಾ ಪ್ರಶಸ್ತಿ

Update: 2017-04-26 19:55 IST

ಲಂಡನ್, ಎ. 26: ಭಾರತೀಯ ಉದ್ಯಮಿಯೊಬ್ಬರು ಬ್ರಿಟನ್‌ನಲ್ಲಿ ಆರಂಭಿಸಿರುವ ಆಹಾರ ಸಂಸ್ಕರಣ ಉದ್ಯಮಕ್ಕೆ ಪ್ರತಿಷ್ಠಿತ ‘ಮಹಾರಾಣಿ ಉದ್ಯಮಶೀಲತಾ ಪ್ರಶಸ್ತಿ 2017’ ಲಭಿಸಿದೆ. ಘಟಕವು ಬ್ರಿಟನ್‌ನ ವಾಣಿಜ್ಯ, ಉದ್ಯಮ ಮತ್ತು ಆರ್ಥಿಕತೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಯೂಸಫಲಿ ಎಂ.ಎ. ಮಾಲೀಕತ್ವದ ‘ವೈ ಇಂಟರ್‌ನ್ಯಾಶನಲ್ (ಯುಕೆ) ಲಿಮಿಟೆಡ್’ ಈ ಪ್ರಶಸ್ತಿ ಗಳಿಸಿದೆ.

ಪ್ರಶಸ್ತಿಯು ಬ್ರಿಟನ್‌ನಲ್ಲಿರುವ ತನ್ನ ಉದ್ಯಮ ಹಿತಾಸಕ್ತಿಗಳನ್ನು ವಿಸ್ತರಿಸುವಂತೆ ಅಬುಧಾಬಿಯಲ್ಲಿ ಪ್ರಧಾನಕಚೇರಿ ಹೊಂದಿರುವ ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ್ನು ಪ್ರೇರೇಪಿಸಿದೆ ಎಂದು 61 ವರ್ಷದ ಯೂಸಫಲಿ ಹೇಳಿದರು.

‘‘ವೈ ಇಂಟರ್‌ನ್ಯಾಶನಲ್ ಯುಕೆ ಲಿ. ಈ ವರ್ಷ ಪ್ರತಿಷ್ಠಿತ ಮಹಾರಾಣಿ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂಬುದನ್ನು ಕೇಳಿ ನನಗೆ ಹೆಮ್ಮೆಯಾಗಿದೆ ಹಾಗೂ ಇದರಿಂದ ನಾನು ಗೌರವಿಸಲ್ಪಟ್ಟಿದ್ದೇನೆ. ಇದು ಖಂಡಿತವಾಗಿಯೂ ಬ್ರಿಟನ್‌ನಲ್ಲಿ ನಾವು ಹೊಂದಿರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಹಾಗೂ ಬ್ರಿಟನ್‌ನ ಆರ್ಥಿಕತೆಗೆ ಇನ್ನಷ್ಟು ದೇಣಿಗೆಗಳನ್ನು ನೀಡಲು ನಮಗೆ ಸ್ಫೂರ್ತಿಯಾಗುತ್ತದೆ’’ ಎಂದು ಕೇರಳದಲ್ಲಿ ಜನಿಸಿರುವ, ಯುಎಇಯಲ್ಲಿ ನೆಲೆಸಿರುವ ಉದ್ಯಮಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ವೈ ಇಂಟರ್‌ನ್ಯಾಶನಲ್ ಯುಕೆ ಲಿ.ನ ಆಹಾರ ಸಂಸ್ಕರಣ ಘಟಕವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ 2013ರಲ್ಲಿ ಸ್ಥಾಪಿಸಲಾಯಿತು. ಕಂಪೆನಿಯಲ್ಲಿ ಸ್ಥಳೀಯ 300 ಉದ್ಯೋಗಿಗಳಿದ್ದಾರೆ. ಇಲ್ಲಿ ಗುಣಮಟ್ಟದ ಆಹಾರೋತ್ಪನ್ನಗಳನ್ನು ಸಂಸ್ಕರಿಸಿ ಮಧ್ಯಪ್ರಾಚ್ಯ, ಭಾರತ ಮತ್ತು ಫಾರ್‌ಈಸ್ಟ್‌ಗಳ ಹೈಪರ್‌ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News