×
Ad

ಕೋರೆಗಳಿಗೆ ಬೇಲಿ ಹಾಕದಿದ್ದಲ್ಲಿ ಲೈಸೆನ್ಸ್ ರದ್ದು: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Update: 2017-04-26 20:41 IST

ಉಡುಪಿ, ಎ.26: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲು ಕೋರೆಗಳ ಸುತ್ತ 15 ದಿನಗಳ ಒಳಗೆ ಸೂಕ್ತ ರೀತಿಯಲ್ಲಿ ಬೇಲಿ ಹಾಕದಿದ್ದಲ್ಲಿ ಕೋರೆಗಳಿಗೆ ನೀಡಿರುವ ಲೈಸೆನ್ಸನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ಹಾಗೂ ಪಾಲನೆಗಾಗಿ ಕಲ್ಲು ಕೋರೆಗಳಿಗೆ ಆವರಣ ಗೋಡೆ ಹಾಕುವ ಕುರಿತಂತೆ ಕಾರ್ಯಪಡೆಯೊಂದನ್ನು ರಚಿಸುವ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿರುವ ಪರವಾನಿಗೆ ಇಲ್ಲದ ಕೋರೆಗಳ ಸರ್ವೇ ಮಾಡಿ ಅವುಗಳನ್ನು ಮುಚ್ಚುವಂತೆ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಈ ಕುರಿತು ಎರಡು ದಿನಗಳಲ್ಲಿ ವರದಿ ನೀಡಲು ತಿಳಿಸಿದರು. ಕಲ್ಲು ಕೋರೆಗಳನ್ನು ಪ್ರಸ್ತುತ ಮುಚ್ಚಿದ್ದರೂ ಸಹ ಅವುಗಳನ್ನು ಹಿಂದೆ ನಿರ್ವಹಣೆ ಮಾಡುತ್ತಿದ್ದ ಮಾಲಕರೇ ಬೇಲಿ ಹಾಕಬೇಕು. ಕಾರ್ಯ ನಿರ್ವಹಿಸುತ್ತಿ ರುವ ಕೋರೆಗಳ ಮಾಲಕರು 15 ದಿನಗಳ ಒಳಗೆ ಸೂಕ್ತ ಬೇಲಿ ಹಾಕದಿದ್ದಲ್ಲಿ ಅವರಿಗೆ ನೀಡಿರುವ ಲೈಸೆನ್ಸ್ ರದ್ದುಗೊಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂಗಳ ವ್ಯಾಪ್ತಿಯಲ್ಲಿರುವ ಕಲ್ಲು ಕೋರೆ, ಮದಗ, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಹೊಂಡಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸೂಚನಾ ಫಲಕ ಗಳನ್ನು ಅಳವಡಿಸಿ, ಒಂದು ವಾರದಲ್ಲಿ ವರದಿ ನೀಡುವಂತೆ ಎಲ್ಲಾ ಗ್ರಾಪಂ ಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಗ್ರಾಪಂ ಮಟ್ಟದಿಂದ ಕಾರ್ಯ ಪಡೆ ರಚಿಸುವ ಕುರಿತಂತೆ ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು.ಈ ಕುರಿತು ಸಿದ್ದಪಡಿಸಿರುವ ಕರಡು ಪ್ರತಿಯನ್ನು ಪರಿಶೀಲಿಸಿ ಅಭಿಪ್ರಾಯ ತಿಳಿಸುವಂತೆ ಸಮಿತಿಯ ಸದಸ್ಯರಿಗೆ ಡಿಸಿ ತಿಳಿಸಿದರು.

ಕುಂದಾಪುರ ತಾಲೂಕಿನ ಕೆರಾಡಿ, ಹಕ್ಲಾಡಿ ಮತ್ತು ಗೋಳಿಹೊಳೆ ಸೇರಿದಂತೆ ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರು ನೀಡಿದ ದೂರಿಗೆ ಉತ್ತರಿಸಿದ ಅಬಕಾರಿ ಇಲಾಖೆಯ ಡಿಸಿ, ಸರಿಯಾದ ಮಾಹಿತಿಯನ್ನು ಇಲಾಖೆಗೆ ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News