ತ್ರಾಸಿ: ಬಜರಂಗದಳ ಕಾರ್ಯಕರ್ತರಿಂದ ಕೊರಗರ ಮನೆಗೆ ದಾಳಿ
ಗಂಗೊಳ್ಳಿ, ಎ.26: ನಿಶ್ಚಿತಾರ್ಥ ಪ್ರಯುಕ್ತ ಮಾಂಸದೂಟದ ಔತಣ ನಡೆಯುತ್ತಿದ್ದ ಕೊರಗ ಕುಟುಂಬದ ಮನೆಯ ಮೇಲೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು, ಮೂವರು ಕೊರಗ ಸಮುದಾಯ ಯುವಕರ ಮೇಲೆ ಹಲ್ಲೆ ನಡೆಸಿ, ಗ್ರಾಪಂ ಸದಸ್ಯೆಯೊಬ್ಬರಿಗೆ ಜಾತಿನಿಂದನೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ತ್ರಾಸಿ ಗ್ರಾಮದ ಆನ್‌ಗೋಡಿನಲ್ಲಿರುವ ಗಾಣದಮಕ್ಕಿ ಕೊರಗ ಕಾಲನಿಯಲ್ಲಿ ಎ.24ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಹೊಸಾಡು ಗ್ರಾಪಂ ಸದಸ್ಯೆ ಶಕುಂತಳಾ ಅವರ ತಂಗಿಯ ಮಗಳ ನಿಶ್ಚಿತಾರ್ಥ ಎ.25ರಂದು ನಿಗದಿಯಾಗಿದ್ದು, ಈ ಪ್ರಯುಕ್ತ ಎ.24ರಂದು ಮನೆಯಲ್ಲಿ ಸಂಬಂಧಿಕರಿಗೆ ಮಾಂಸದೂಟದ ಔತಣ ನಡೆಯುತ್ತಿತ್ತು. ಈ ವೇಳೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರಾದ ಗುರುರಾಜ್ ಆಚಾರ್ಯ, ಸುನೀಲ್ ಪೂಜಾರಿ, ಚಂದ್ರಕಾಂತ ಪೂಜಾರಿ ಸಹಿತ 10 ಮಂದಿಯ ತಂಡ ಮನೆಯಲ್ಲಿ ದನದ ಮಾಂಸ ಮಾಡಿರುವುದಾಗಿ ಆರೋಪಿಸಿ ದಾಳಿ ನಡೆಸಿತು.
ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ದುಷ್ಕರ್ಮಿಗಳು ಶಕುಂತಳಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಾಣದಮಕ್ಕಿಯ ಹರೀಶ್(26), ಹಳ್ಳಾಡಿಯ ಶ್ರೀಕಾಂತ್(19), ಕೋಣ್ಕಿಯ ಮಹೇಶ್(20) ಎಂಬವರಿಗೆ ತೀವ್ರ ಹಲ್ಲೆ ನಡೆಸಿದರು. ಎಲ್ಲರಿಗೂ ಜಾತಿ ನಿಂದನೆ ಮಾಡಿ, ಕಾಲನಿಯಲ್ಲಿರುವ ಎಲ್ಲಾ ಎಂಟು ಕೊರಗ ಮನೆಯನ್ನು ಪೆಟ್ರೋಲ್ ಹಾಕಿ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬಳಿಕ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರೇ ಗಂಗೊಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಹಲ್ಲೆಗೊಳಗಾದ ಯುವಕರನ್ನು ಪೊಲೀಸರಿಗೆ ಒಪ್ಪಿಸಿ ದರು. ಈ ಯುವಕರ ಮೇಲೆ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಂಧಿತ ಯುವಕರನ್ನು ಇಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಹರೀಶ್ ಎಂಬವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿ ಜಾತಿನಿಂದನೆ ಮಾಡಿ ಬೆದರಿಕೆ ಹಾಕಿರುವ 10 ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಶಕುಂತಳಾ ನೀಡಿರುವ ದೂರಿನಂತೆ ಇಂದು ರಾತ್ರಿ ವೇಳೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.
ಹಲ್ಲೆಕೋರರನ್ನು ಬಂಧಿಸಲು ಆಗ್ರಹ
ಕೊರಗರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಬಜರಂಗದಳದ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಗರ್ಜನೆ) ಮುಖಂಡರಾದ ಉದಯ ಕುಮಾರ್ ತಲ್ಲೂರು, ವಿಜಯ ಕೆ.ಎಸ್., ಚಂದ್ರಮಾ ತಲ್ಲೂರು ಮೊದಲಾದವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.