ಮೊಬೈಲ್ ಅಂಗಡಿಯಲ್ಲಿ ಕಳ್ಳತನ
ಮುಲ್ಕಿ, ಎ.25: ಇಲ್ಲಿನ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್ ನಗರ(ಲಿಂಗಪ್ಪಯ್ಯಕಾಡು) ಜಂಕ್ಷನ್ ಬಳಿ ಇರುವ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ.
ಆಲ್ಟೋ 800 ಕಾರಿನಲ್ಲಿ ಮುಸುಕು ಹಾಕಿಕೊಂಡು ಬಂದ ಇಬ್ಬರು ಕಳ್ಳರು ಕೆ.ಎಸ್.ರಾವ್ ನಗರದ ಜಂಕ್ಷನ್ ಬಳಿ ಇರುವ ಸಮದ್ ಎಂಬವರ "ಸ್ಕೈನೆಟ್" ಎಂಬ ಮೊಬೈಲ್ ಅಂಗಡಿಯ ಬೀಗ ತುಂಡರಿಸಿ ಶಟರನ್ನು ಬಗ್ಗಿಸಿ ಒಳ ಪ್ರವೇಶಿಸಿದ್ದಾರೆ. ಅಂಗಡಿಯಲ್ಲಿದ್ದ 27 ಸಾವಿರ ರೂ. ಹಾಗೂ ಎರಡು ಬೆಲೆಬಾಳುವ ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ಈ ಸಂದರ್ಭ ಮೂಡುಬಿದಿರೆಯ ಜಾತ್ರೆ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ಸ್ಥಳೀಯರು ಅಂಗಡಿಯಲ್ಲಿ ಬೆಳಕು ಉರಿಯುತ್ತಿದ್ದುದನ್ನು ಕಂಡು ಸ್ಥಳಕ್ಕೆ ದಾವಿಸಿದ್ದಾರೆ.
ಕಳ್ಳರಲ್ಲಿ ಒಬ್ಬ ಕಾರಿನ ಹತ್ತಿರ ನಿಂತಿದ್ದರೆ ಇನ್ನೋರ್ವ ಸ್ಥಳೀಯರನ್ನು ನೋಡಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದಾಗ ಕಲ್ಲೆಸೆದು ಇಬ್ಬರೂ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.