ಲಾರಿ-ಬಸ್-ಕಾರುಗಳ ನಡುವೆ ಸರಣಿ ಅಪಘಾತ: ಆರ್ ಟಿಒ ಅಧಿಕಾರಿಗೆ ಗಂಭೀರ ಗಾಯ
Update: 2017-04-26 22:35 IST
ವಿಟ್ಲ, ಎ.26: ಲಾರಿ-ಬಸ್-ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಆರ್‌ಟಿಒ ಅಧಿಕಾರಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪ ಸಂಭವಿಸಿದೆ.
ಮಾಣಿಯ ಸೂರಿಕುಮೇರು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಗೂಡ್ಸ್ ಲಾರಿಗೆ ಹಿಂದಿನಿಂದ ಬಂದ ಕಟೀಲು ಮೇಳದವರ ಬಸ್ ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯನ್ನು ತಪ್ಪಿಸುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಪಕ್ಕದ ಚರಂಡಿಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಪುತ್ತೂರು ಸಾರಿಗೆ ಇಲಾಖೆಯ ಅಧಿಕಾರಿ ಫೆಲಿಕ್ಸ್(57) ಅವರಿಗೆ ಗಂಭೀರ ಗಾಯಗಳಾಗಿವೆ.
ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರು ಫೆಲಿಕ್ಸ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.