ನೈಸರ್ಗಿಕ ಅನಿಲ ಪೈಪ್ ಲೈನ್: ದ್ವಿತೀಯ ಹಂತದ ನಿರ್ಮಾಣ ಕಾರ್ಯ ಆರಂಭ
ಕಾಸರಗೋಡು, ಎ.26: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೈಲ್) ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಸಲಿರುವ ದ್ವಿತೀಯ ಹಂತದ ಕಾಮಗಾರಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಕೊಚ್ಚಿಯಿಂದ ಮಂಗಳೂರಿಗಿರುವ ನೈಸರ್ಗಿಕ ಅನಿಲ ಪೈಪ್‌ಲೈನ್‌ನಲ್ಲಿ 81 ಕಿಲೋ ಮೀಟರ್ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. 2012ರಲ್ಲಿ ಮೊದಲ ಹಂತದ ನಿರ್ಮಾಣ ಕಾಮಗಾರಿಯ ಅಂಗವಾಗಿ 11 ಕಿಲೋ ಮೀಟರ್ ಪೈಪ್ ಅಳವಡಿಸಲಾಗಿದೆ. ಇನ್ನುಳಿದ ಕಾಮಗಾರಿಯನ್ನು ಈ ವರ್ಷ ಪೂರ್ತಿಗೊಳಿಸಲು ಉದ್ದೇಶಿಸಿರುವುದಾಗಿ ಯೋಜನೆಯ ಉಸ್ತುವಾರಿ ವಹಿಸುತ್ತಿರುವ ಸಹಾಯಕ ಜನರಲ್ ಮ್ಯಾನೇಜರ್ ಟೋನಿ ಮ್ಯಾಥ್ಯೂ ತಿಳಿಸಿದ್ದಾರೆ.
ಗೈಲ್ ಪೈಪ್ ಲೈನ್ ಯೋಜನೆಯ ಪ್ರಗತಿ ವೌಲ್ಯಮಾಪನ ನಡೆಸಿ ವಾಣಿಜ್ಯ ಇಲಾಖೆ ಸಿಟಿ ಗ್ಯಾಸ್ ಯೋಜನೆಗಿರುವ ಟೆಂಡರ್ ಆಹ್ವಾನಿಸಲಿದೆ. 2018ರ ಅಂತ್ಯದಲ್ಲಿ ಎರಡೂ ಯೋಜನೆಗಳನ್ನು ಒಟ್ಟಿಗೆ ಕಾರ್ಯಾರಂಭಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಎರ್ನಾಕುಳದ ಸಹಿತ ತ್ರಿಶೂರು, ಮಲಪ್ಪುರಂ, ಕೋಝಿಕ್ಕೋಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಸಿಟಿ ಗ್ಯಾಸ್ ಯೋಜನೆ ಜಾರಿಗೊಳಿಸಲು ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿಎನ್‌ಜಿಆರ್‌ಬಿ) ಅನುಮತಿ ನೀಡಿದೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿರುವುದರಿಂದ ಅನಾಹುತಗಳ ಸಾಧ್ಯತೆ ಕಡಿಮೆಯಾಗಲಿದೆ. ಆಧುನಿಕ ಫ್ಲಾಟ್ ಸಮುಚ್ಛಯಗಳಲ್ಲಿ ನಿರ್ಮಾಣ ಹಂತದಲ್ಲೇ ಗ್ಯಾಸ್ ಪೈಪ್ ಅಳವಡಿಸಲಿರುವ ಸಿದ್ಧತೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.