30ರಂದು ಕಾರ್ಕಳದಲ್ಲಿ ‘ದೇವಾಡಿಗ ಸಂಗಮ’
ಉಡುಪಿ, ಎ.26: ದೇವಾಡಿಗ ಸುಧಾರಕ ಸಂಘದ ಕಾರ್ಕಳ ಇದರ ಆಶ್ರಯದಲ್ಲಿ ಅಖಿಲ ಭಾರತ ಮಟ್ಟದ ದೇವಾಡಿಗರ ಸಮಾವೇಶ ‘ದೇವಾಡಿಗ ಸಂಗಮ-2017’ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಎ.30ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರವಿಶಂಕರ್ ಶೇರಿಗಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಬಡಮಕ್ಕಳ ಶಿಕ್ಷಣ ಮತ್ತು ಬಡ ಕುಟುಂಬಗಳ ಅಗತ್ಯದ ಬೇಡಿಕೆ ಗಳಿಗೆ ಸ್ಪಂದಿಸಿ ಆಸರೆ ನೀಡುವ ಮಹತ್ವಾಕಾಂಕ್ಷಿಯ ‘ವಿದ್ಯಾ-ಆಸರೆ’ ಯೋಜನೆಗೆ ಸಮಾವೇಶದಲ್ಲಿ ಚಾಲನೆ ನೀಡಲಾಗುವುದು ಎಂದರು.
ಅಲ್ಲದೇ ವಾಲಿಬಾಲ್, ಕಬಡ್ಡಿ, ತ್ರೋಬಾಲ್ ಪಂದ್ಯಾಟಗಳನ್ನಲ್ಲದೇ, ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಹಾಗೂ ದೇವಾಡಿಗ ಯುವ ಸಂಘಟನೆಗಾಗಿ ವಾರ್ಷಿಕೋತ್ಸವನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಸ್ಪರ್ಧೆಗಳ ಉದ್ಘಾಟನೆ ಎ.30ರ ಬೆಳಗ್ಗೆ 9:30ಕ್ಕೆ ನಡೆಯಲಿದೆ ಎಂದರು.
ದೇವಾಡಿಗ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರವಿಶಂಕರ್ ಶೇರಿಗಾರ್ ವಹಿಸಲಿದ್ದಾರೆ ಎಂದರು.
ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಯುಪಿಸಿಎಲ್‌ನ ಉಪಾದ್ಯಕ್ಷ ಕಿಶೋರ್ ಆಳ್ವ, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಬೆಂಗಳೂರಿನ ಉದ್ಯಮಿ ಹರ್ಷ ವೀರಪ್ಪ ಮೊಯ್ಲಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಪ್ರಯುಕ್ತ ರಾಜ್ ಮತ್ತು ರಾಜ್ ಮ್ಯೂಸಿಕ್, ರಾಗ್ ಲಹರಿ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಸಮರ ಸಾರತಿ ತಂಡದಿಂದ ‘ಬಲೆ ತೆಲಿಪಾವ’ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ದೇವಾಡಿಗ ಸಂಘದ ಅಧ್ಯಕ್ಷ ಸೀತಾರಾಮ ದೇವಾಡಿಗ, ಕಾರ್ಕಳ ಸಂಘದ ಪ್ರದಾನ ಕಾರ್ಯದರ್ಶಿ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.