ಓದು ಇಲ್ಲದ ಸಮಾಜ ನಾಶ: ಜಿ.ಎಸ್.ನಟೇಶ್
ಉಡುಪಿ, ಎ.26: ಇಂದು ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಓದುವುದನ್ನು ಮರೆತು ಸಂಸ್ಕಾರ ಇಲ್ಲದವರಂತಾಗಿದ್ದಾರೆ. ಓದು ಇಲ್ಲದ ಸಮಾಜ ನಾಶದತ್ತ ಸಾಗುತ್ತದೆ ಎಂದು ಶಿವಮೊಗ್ಗದ ವಿದ್ವಾನ್ ಜಿ.ಎಸ್.ನಟೇಶ್ ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಎಂಜಿಎಂ ಕಾಲೇಜಿನ ಆಶ್ರಯದಲ್ಲಿ ಡಾ.ಎ.ವಿ.ಬಾಳಿಗಾ ಅವರ 113ನೆ ಜನ್ಮ ದಿನಾಚರಣೆಯ ಪ್ರಯುಕ್ತ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಕೊಡುವುದರಲ್ಲಿದೆ ಸಂತೋಷ’ ಮಂಕುತಿಮ್ಮನ ಕಗ್ಗ ಆಧಾರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಉಡುಪಿಯ ಡಿವಿಜಿ ಬಳಗವನ್ನು ಉದ್ಘಾಟಿಸಿದ ಮಂಗಳೂರು ಕಾರ್ಪೊ ರೇಶನ್ ಬ್ಯಾಂಕ್ ಟ್ರೈನಿಂಗ್ ಸೆಂಟರ್‌ನ ಕನಕರಾಜು ಮಾತನಾಡಿ, ಸಾಹಿತ್ಯದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಬದುಕು ರೂಪಿಸುವ ಮಂಕುತಿಮ್ಮನ ಕಗ್ಗವನ್ನು ಹೊಸ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಸಬೇಕಾಗಿದೆ. ಯುವಕರು ಇದರತ್ತ ಹೆಚ್ಚು ಹೆಚ್ಚು ಆಕರ್ಷಿತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿ ಸಿದ್ದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮದ್ಯವ್ಯಸನಿಗಳ ಮಕ್ಕಳ ಕುರಿತ ಕಿರುಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.