×
Ad

ಉದ್ಯೋಗದ ಭರವಸೆ ನೀಡಿ ಮಹಿಳೆಯ ಸಾಮೂಹಿಕ ಅತ್ಯಾಚಾರ

Update: 2017-04-27 12:36 IST

ಗುರುಗ್ರಾಮ್, ಎ.27: ಇಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ನಿರ್ವಹಿಸುತ್ತಿದ್ದ 26 ವರ್ಷದ ಗೃಹಿಣಿಗೆ ಒಳ್ಳೆಯ ಉದ್ಯೋಗದ ಭರವಸೆ ನೀಡಿದ ಪರಿಚಿತನೊಬ್ಬ ಇತರ 5 ಮಂದಿಯೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬಿಲಾಸಪುರ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. 

ವೈದ್ಯಕೀಯ ಪರೀಕ್ಷೆಯಿಂದ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಎಲ್ಲಾ ಮಂದಿ ಆರೋಪಿಗಳನ್ನೂ ಬಂಧಿಸಲಾಗಿದೆ. ಬಂಧಿತರನ್ನು ಅಮಿತ್, ಕಲ್ಲು ರಾಮ್, ಜಿತೇಂದ್ರ, ಸಾಕೇತ್ ಶರ್ಮ, ಕುಲದೀಪ್, ರಾಕೇಶ್ ಮತ್ತು ದೀಪಲ್ ಎಂದು ಗುರುತಿಸಲಾಗಿದ್ದು ಅವರಲ್ಲಿ ಕಲ್ಲುರಾಮ್ ಯುವತಿಯ ಪರಿಚಿತನೆನ್ನಲಾಗಿದೆ.

ಮಾನೆಸರ್ ನಲ್ಲಿರುವ ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ದೊರಕಿಸುವ ಭರವಸೆಯೊಂದಿಗೆ ತನ್ನನ್ನು ಕಲ್ಲುರಾಮ್ ಮಂಗಳವಾರ ಸಂಜೆ ಐಎಂಟಿ ಚೌಕ್ ಬಳಿ ಭೇಟಿಯಾಗಲು ಫೋನ್ ಮೂಲಕ ತಿಳಿಸಿದ್ದನೆಂದು ಯುವತಿ ಹೇಳಿದ್ದಾಳೆ. ಅಲ್ಲಿಗೆ ಬಂದ ಆಕೆ ಕಲ್ಲು ಮೇಲೆ ವಿಶ್ವಾಸವಿರಿಸಿ ಆತನೊಂದಿಗೆ ಗುರ್ಗಾಂವ್ ನಿಂದ ಮಾನೆಸರ್ ಗೆ ಆಗಮಿಸಿದಾಗ ಏಳು ಗಂಟೆಯಾಗಿತ್ತು. ಅಲ್ಲಿ ‘ಸುಪರ್‌ವೈಸರ್’ ಆಗಮಿಸಲಿದ್ದಾರೆಂದು ಹೇಳಿ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದ. 15 ನಿಮಿಷ ಕಾದ ಬಳಿಕ ಅಲ್ಲಿಗೆ ಬೈಕಿನಲ್ಲಿ ಆಗಮಿಸಿದ್ದ ಸುಪರ್‌ವೈಸರ್ ಎಂದು ಹೇಳಲಾದ ವ್ಯಕ್ತಿ ಆಕೆಯನ್ನು ತನ್ನ ಬೈಕಿನಲ್ಲಿ ಕುಳ್ಳಿರಿಸಿ ಕಂಪೆನಿಗೆ ಹೋಗುವ ಬದಲು ಬಿಲಾಸಪುರ ಸಮೀಪದ ಶಂಕರ್ ಕಿ ಧನಿ ಗ್ರಾಮದ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅದಾಗಲೇ ಇಬ್ಬರಿದ್ದರೆ, ನಂತರ ಮೂವರು ಅವರನ್ನು ಸೇರಿಕೊಂಡರು. ಸುಪರ್‌ವೈಸರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೇರಿ ಎಲ್ಲ ಆರು ಮಂದಿಯೂ ಆಕೆಯ ಮೇಲೆ ಅತ್ಯಾಚಾರಗೈದಿದ್ದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಘಟನೆಯನ್ನು ಯಾರಲ್ಲಿಯೂ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಾಗದು ಎಂದು ಅವರು ಬೆದರಿಸಿದ್ದಾರೆಂದೂ ಆಕೆ ಹೇಳಿದ್ದಾಳೆ.

ಬುಧವಾರ ಬೆಳಗ್ಗೆ ಅವರಿಂದ ತಪ್ಪಿಸಿಕೊಂಡ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆ ಮಧ್ಯ ಪ್ರದೇಶದವಳಾಗಿದ್ದು ವಝೀರಾಬಾದ್ ನ ಸೆಕ್ಟರ್ 51 ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ತನ್ನ ಪತಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದಾಳೆ. ಆಕೆಯ ಪತಿ ಗುರುಗ್ರಾಮದಲ್ಲಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News