ವಾರ ಕಳೆದರೂ ಬಂಧನವಾಗದ ಜಲೀಲ್ ಹಂತಕರು: ಸಚಿವ ರಮಾನಾಥ ರೈ ಕಾರಿಗೆ ಗ್ರಾಮಸ್ಥರ ಮುತ್ತಿಗೆ

Update: 2017-04-27 12:40 GMT

ವಿಟ್ಲ, ಎ.27: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆಯಾಗಿ ವಾರ ಕಳೆದರೂ ಇನ್ನೂ ನೈಜ ಹಂತಕರನ್ನು ಬಂಧಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.

ಜಲೀಲ್ ಮೃತರಾಗಿ ಏಳನೇ ದಿನವಾದ ಗುರುವಾರ ಅವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಸಚಿವ ರಮಾನಾಥ ರೈ ಕಾರಿಗೆ ಸುಮಾರು 5ರಿಂದ 10 ನಿಮಿಷಗಳ ಕಾಲ ಮುತ್ತಿಗೆ ಹಾಕಿದ ಕಾರ್ಯಕರ್ತರು ಮತ್ತು ಸ್ಥಳೀಯರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಟ್ಲದ ಕೆಲವು ಪೊಲೀಸರ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರೂ ಅವರನ್ನು ಇವತ್ತಿನವರೆಗೆ ವರ್ಗಾವಣೆ ಮಾಡಲು ನಮ್ಮ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಪಕ್ಷಕ್ಕೆ ಬೇಕಾಗಿ ಜೀವನವನ್ನೇ ಅರ್ಪಿಸಿದ ಜಲೀಲ್ ಕುಟುಂಬದ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಕಾಳಜಿ ವಹಿಸಿಲ್ಲ. ವೋಟ್ ಮಾತ್ರ ಮುಖ್ಯ ಎಂಬ ರೀತಿಯಲ್ಲಿ ನೀವೆಲ್ಲರೂ ವರ್ತಿಸುತ್ತಿದ್ದೀರಿ ಎಂದು ಘೇರಾವ್ ಹಾಕಿದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಂತಕರನ್ನು ಹಿಡಿಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಲಾಖಾಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆರೋಪಿಗಳನ್ನು ಹಿಡಿಯುವ ಬಗ್ಗೆ ಇಲಾಖೆಯ ಮೇಲೆ ವಿಶ್ವಾಸವಿದೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈ ಉತ್ತರಿಸಿದರು. ಬಳಿಕ ಜಲೀಲ್ ಕುಟುಂಬಸ್ಥರು ಬಂದು ಸಚಿವರ ವಾಹನ ಸಂಚರಿಸಲು ಅನುವು ಮಾಡಿಕೊಟ್ಟರು.

ಬಂದ್‌ಗೆ ಕರೆ: ಆರೋಪಿಗಳ ಸರಿಯಾದ ಮಾಹಿತಿ ಪೊಲೀಸ್ ಇಲಾಖೆಗೆ ಇದೆ. 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿರುವ ಪೊಲೀಸ್ ಇಲಾಖೆ 7 ದಿನ ಕಳೆದರೂ ಆರೋಪಿಗಳನ್ನು ಬಂಧಿಲ್ಲ ಎಂದಿರುವ ಸ್ಥಳೀಯ ಯುವಕರು ಹಾಗೂ ನಾಗರಿಕರು ಎ.28ರಿಂದ ಅನಿರ್ಧಿಷ್ಠಾವಧಿ ಕಾಲದವರೆಗೆ ಕನ್ಯಾನ ಹಾಗೂ ಕರೋಪಾಡಿ ಬಂದ್‌ಗೆ ಕರೆ ನೀಡಿದ್ದಾರೆ. ಆರೋಪಿಗಳ ಬಂಧನವಾದರೆ ಬಂದ್ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News