ಟ್ರಂಪ್ ಆಡಳಿತದಲ್ಲಿ ‘ಇಸ್ಲಾಮ್‌ಭಯ’ ಘಟನೆಗಳು 1,000 ಶೇ. ಏರಿಕೆ

Update: 2017-04-27 14:27 GMT

ವಾಶಿಂಗ್ಟನ್, ಎ. 27: ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (ಸಿಬಿಪಿ) ಅಧಿಕಾರಿಗಳು ಇಸ್ಲಾಮ್‌ಭಯದಿಂದಾಗಿ ಮುಸ್ಲಿಮರ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಕರಣಗಳು, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ 1,000 ಶೇಕಡದಷ್ಟು ಹೆಚ್ಚಿದೆ ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್) ಹೇಳಿದೆ.

ಅಧಿಕಾರಿಗಳು ಮುಸ್ಲಿಮರನ್ನು ಮುಸ್ಲಿಮರು ಎನ್ನುವ ಕಾರಣಕ್ಕಾಗಿ ಭಿನ್ನ ರೀತಿಯಲ್ಲಿ ನಡೆಸಿಕೊಂಡ ಪ್ರಕರಣಗಳು, 2017ರ ಮೊದಲ ಮೂರು ತಿಂಗಳಲ್ಲಿ ತಾನು ನಿಭಾಯಿಸುತ್ತಿರುವ ಪ್ರಕರಣಗಳ 23 ಶೇಕಡದಷ್ಟಿದೆ ಎಂದು ಸಿಎಐಆರ್ ತಿಳಿಸಿದೆ.

2017ರ ಜನವರಿ-ಮಾರ್ಚ್ ತಿಂಗಳಲ್ಲಿ 193 ಸಿಬಿಪಿ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 181 ಪ್ರಕರಣಗಳು ಟ್ರಂಪ್ ಆಡಳಿತವು ಜನವರಿ 27ರಂದು ಹೊರಡಿಸಿದ ಮುಸ್ಲಿಮ್ ನಿಷೇಧ ಆದೇಶದ ಬಳಿಕ ದಾಖಲಾಗಿವೆ. 2016ರ ಮೊದಲ ಮೂರು ತಿಂಗಳಲ್ಲಿ ಸಿಎಐಆರ್‌ನಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 17 ಆಗಿತ್ತು ಎಂದು ‘ದಿ ಇಂಡಿಪೆಂಡೆಂಟ್’ ಬುಧವಾರ ವರದಿ ಮಾಡಿದೆ.

‘‘ಇವು ನಮಗೆ ವರದಿಯಾದ ಘಟನೆಗಳು ಹಾಗೂ ನಾವು ಅವುಗಳನ್ನು ಪರಿಶೀಲಿಸುತ್ತಿದ್ದೇವೆ’’ ಎಂದು ಸಿಎಐಆರ್‌ನ ಇಸ್ಲಾಮ್ ಭಯದ ಬಗ್ಗೆ ತನಿಖೆ ನಡೆಸುವ ಗುಂಪಿನ ನಿರ್ದೇಶಕ ಕಾರಿ ಸೇಲರ್ ಹೇಳಿದರು.

ಗಡಿ ಅಧಿಕಾರಿಗಳ ವಿರುದ್ಧ ಹೊರಿಸಲಾಗುವ ಇಸ್ಲಾಮ್‌ಭಯ ಆರೋಪಗಳು ಹೊಸದೇನಲ್ಲ ಎಂದು ಸೇಲರ್ ತಿಳಿಸಿದರು.ಆದಾಗ್ಯೂ, ವಲಸೆ ನಿಷೇದ ಹಾಗೂ ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿ ಟ್ರಂಪ್ ಹೊರಡಿಸಿದ ಎರಡು ಆದೇಶಗಳ ಬಳಿಕ ಈ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News