23 ಭಾರತೀಯ ಬೆಸ್ತರ ಸೆರೆಹಿಡಿದ ಪಾಕ್
ಅಹ್ಮದಾಬಾದ್, ಎ.27: ಗುಜರಾತ್ ಕಡಲತೀರದ ಬಳಿ ಮೀನುಗಾರಿಕೆ ನಡೆಸುತ್ತಿದ್ದ 23 ಭಾರತೀಯ ಬೆಸ್ತರನ್ನು ಪಾಕಿಸ್ತಾನದ ಸಮುದ್ರತೀರ ಭದ್ರತಾ ತಂಡ(ಪಿಎಂಎಸ್‌ಎ) ಸೆರೆ ಹಿಡಿದಿದ್ದು ಅವರ ನಾಲ್ಕು ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಮೀನುಗಾರಿಕೆ ಕಾರ್ಮಿಕರ ರಾಷ್ಟ್ರೀಯ ವೇದಿಕೆ (ಎನ್‌ಎಫ್‌ಎಫ್) ತಿಳಿಸಿದೆ.
ರಾಜಸ್ತಾನದ ಪೋರಬಂದರ್‌ನಿಂದ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಾ ಬಂದಿದ್ದ ಇವರನ್ನು ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆ ಬಳಿ ಸೆರೆಹಿಡಿಯಲಾಗಿದೆ . ಇವರನ್ನು ಕರಾಚಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿರುವುದಾಗಿ ಎನ್‌ಎಫ್‌ಎಫ್ ಕಾರ್ಯದರ್ಶಿ ಮನೀಷ್ ಲೊಧಾರಿ ತಿಳಿಸಿದ್ದಾರೆ.
ಮೀನುಗಾರಿಕೆ ನಡೆಸುವವರನ್ನು ಬಂಧಿಸುವುದು ಈಗ ಭಾರತ ಮತ್ತು ಪಾಕ್ ಅಧಿಕಾರಿಗಳಿಂದ ನಡೆಯುತ್ತಿರುವ ನಿರಂತರ ಪ್ರಕ್ರಿಯೆಯಾಗಿದೆ. ಇತ್ತೀಚೆಗಷ್ಟೇ ಅಕಸ್ಮಾತಾಗಿ ಪಾಕ್ ಸಮುದ್ರವ್ಯಾಪ್ತಿ ಪ್ರವೇಶಿಸಿದ್ದ ಭಾರತೀಯ ಮೀನುಗಾರರನ್ನು ಬೆನ್ನಟ್ಟಿ ಬಂದಿದ್ದ ಇಬ್ಬರು ಪಾಕ್ ಕಮಾಂಡೋಗಳಿದ್ದ ದೋಣಿ ಕಡಲಿನಲ್ಲಿ ಮಗುಚಿ ಬಿದ್ದು ಪಾಕ್ ಕಮಾಂಡೋಗಳು ನೀರಿನಲ್ಲಿ ಮುಳುಗೇಳುತ್ತಿದ್ದಾಗ ಅವರನ್ನು ಭಾರತೀಯ ಕೋಸ್ಟ್‌ಗಾರ್ಡ್‌ನವರು ರಕ್ಷಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿತ್ತು.