ನಾನು ಪರಿತ್ಯಕ್ತ ವಲಸಿಗರ ಮಗ : ಪೋಪ್
Update: 2017-04-27 20:43 IST
ರೋಮ್ (ಇಟಲಿ), ಎ. 27: ತಾನು ಯಾವತ್ತೂ ತನ್ನನ್ನು ವಲಸಿಗರೊಂದಿಗೆ ಗುರುತಿಸಿಕೊಳ್ಳುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಕೈಯಲ್ಲಿ ಏನೂ ಇಲ್ಲದೆ ಅರ್ಜೆಂಟೀನಾಕ್ಕೆ ಹೋದ ಬಡ ಇಟಲಿಯನ್ನರ ಮಗ ಹಾಗೂ ಮೊಮ್ಮಗ ತಾನು ಎಂದು ಅವರು ಹೇಳಿದ್ದಾರೆ.
‘‘ಸ್ವತಃ ನಾನೇ ವಲಸಿಗರ ಕುಟುಂಬದಲ್ಲಿ ಹುಟ್ಟಿದವನು’’ ಎಂದು ಕೆನಡದ ವ್ಯಾಂಕೂವರ್‌ನಲ್ಲಿ ನಡೆಯುತ್ತಿರುವ ‘ದ ಫ್ಯೂಚರ್ ಯೂ’ ಸಮ್ಮೇಳನಕ್ಕೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ 80 ವರ್ಷದ ಪೋಪ್ ಹೇಳಿದ್ದಾರೆ.
‘‘ಹೆಚ್ಚಿನ ಇಟಲಿಯನ್ನರಂತೆ ನನ್ನ ತಂದೆ, ನನ್ನ ಅಜ್ಜ-ಅಜ್ಜಿ ಅರ್ಜೆಂಟೀನಾಕ್ಕೆ ಬರಿಗೈಯಲ್ಲಿ ತೆರಳಿ ಬಡತನದ ಬೇಗೆಯನ್ನು ಅನುಭವಿಸಿದರು. ನಾನು ಕೂಡ ಇಂದಿನ ‘ಪರಿತ್ಯಕ್ತ’ ಜನರ ಪೈಕಿ ಒಂದಾಗಿರಬಹುದಾಗಿತ್ತು’’ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.