ದಿನಕರನ್ ನಿವಾಸದಲ್ಲಿ ವಿಚಾರಣೆ ನಡೆಸಿದ ಪೊಲೀಸರು
ಹೊಸದಿಲ್ಲಿ, ಎ.27: ಚೆನ್ನೈಯಲ್ಲಿರುವ ಕೇಂದ್ರ ಸರಕಾರ ಕಚೇರಿಗಳ ಸಂಕೀರ್ಣ- ರಾಜಾಜಿ ಭವನದಲ್ಲಿ ಎಐಎಡಿಎಂಕೆ ಅಮ್ಮಾ ಪಕ್ಷದ ಮುಖಂಡ ಟಿ.ಟಿ.ವಿ.ದಿನಕರನ್ ಅವರನ್ನು ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ ದಿಲ್ಲಿ ಪೊಲೀಸರು ಬಳಿಕ ವೆಂಕಟೇಶ್ವರ ನಗರದಲ್ಲಿರುವ ದಿನಕರನ್ ಮನೆಯಲ್ಲಿ ವಿಚಾರಣೆ ನಡೆಸಲು ಅವರನ್ನು ಕರೆದೊಯ್ದರು.
ಎರಡೆಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿದ ಆರೋಪ ದಿನಕರನ್ ಮೇಲಿದೆ. ಲಂಚದ ಹಣವನ್ನು ಚೆನ್ನೈಯಿಂದ ದಿಲ್ಲಿಗೆ ಯಾವ ರೀತಿ ಸಾಗಿಸಲಾಗಿದೆ ಎಂಬುದನ್ನು ತನಿಖೆ ನಡೆಸಲು ದಿಲ್ಲಿ ಪೊಲೀಸರ ತಂಡವೊಂದು ಚೆನ್ನೈಗೆ ಆಗಮಿಸಿದೆ. ದಿನಕರನ್ ಮತ್ತವರ ಸಹಚರ ಮಲ್ಲಿಕಾರ್ಜುನರನ್ನು ಚೆನ್ನೈಯಲ್ಲಿರುವ ಅವರ ನಿವಾಸದಲ್ಲೇ ವಿಚಾರಣೆ ನಡೆಸಲು ಪೊಲೀಸರು ಸ್ಥಳೀಯ ನ್ಯಾಯಾಲಯವೊಂದರಿಂದ ವಾರಂಟ್ ಪಡೆದುಕೊಂಡಿದ್ದಾರೆ.
ಈ ಮಧ್ಯೆ ದಿನಕರನ್ ಅವರನ್ನು ಭೇಟಿಯಾಗಲು ತಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ದೂರಿ ಇಬ್ಬರು ವಕೀಲರು ಹಾಗೂ ಹಲವಾರು ಮಂದಿ ಬೆಂಬಲಿಗರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.