2,000 ಕೋ.ರೂ.ಚೆಕ್ ಬೌನ್ಸ್ ಆಗಬಾರದು: ಸುಬ್ರತಾ ರಾಯ್‌ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Update: 2017-04-27 15:15 GMT

ಹೊಸದಿಲ್ಲಿ,ಎ.27: ಸಹಾರಾ ಉದ್ಯಮ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ (68) ಅವರು ಜೂನ್ 15ರೊಳಗೆ ಸರ್ವೋಚ್ಚ ನ್ಯಾಯಾಲಯದಲ್ಲಿ 1,500 ಕೋ.ರೂ.ಗಳನ್ನು ಜಮಾ ಮಾಡದಿದ್ದರೆ ದಿಲ್ಲಿಯ ತಿಹಾರ ಜೈಲಿಗೆ ವಾಪಸಾಗುವುದು ಅನಿವಾರ್ಯವಾಗಲಿದೆ. ಹೂಡಿಕೆದಾರರಿಗೆ ಹಣವನು ಮರಳಿಸದ ಆರೋಪದಲ್ಲಿ 2014ರಲ್ಲಿ ಬಂಧಿಸಲ್ಪಟ್ಟಿದ್ದ ರಾಯ್‌ಗೆ ಕಳೆದ ವರ್ಷ ಜಾಮೀನು ನೀಡಲಾಗಿತ್ತು.

ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಿದ್ದ ರಾಯ್, ಜೂನ್ ಮತ್ತು ಜುಲೈನಲ್ಲಿ 1,500 ಕೋ.ರೂ.ಮತ್ತು 500 ಕೋ.ರೂ.ಹೀಗೆ ಒಟ್ಟು 2,000ರೂ.ಮೊತ್ತದ ಚೆಕ್‌ಗಳನ್ನು ನೀಡುವುದಾಗಿ ತಿಳಿಸಿದಾಗ, ‘‘ನಾವು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಚೆಕ್‌ಗಳು ನಗದು ಹಣವಿಲ್ಲದೆ ವಾಪಸ್ ಆದರೆ ನಿಮ್ಮನ್ನು ನ್ಯಾಯಾಲಯದಿಂದಲೇ ತಿಹಾರ ಜೈಲಿಗೆ ರವಾನಿಸುತ್ತೇವೆ ಎಂದು ನ್ಯಾಯಾಧೀಶರು ಪ್ರತಿಕ್ರಿಯಿಸಿದರು.

ಸಹಾರಾ ಗ್ರೂಪ್ ಉಳಿತಾಯ ಯೋಜನೆಯೊಂದರ ಮೂಲಕ ಹೂಡಿಕೆದಾರರಿಂದ ಸಹಸ್ರಾರು ಕೋ.ರೂ.ಗಳನ್ನು ಸಂಗ್ರಹಿಸಿದ್ದು, ಇದು ಅಕ್ರಮವೆಂದು ಸೆಬಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅದು ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸುವಂತೆ ಮಾಡುವ ಹೊಣೆ ಸರ್ವೋಚ್ಚ ನ್ಯಾಯಾಲಯದ ಹೆಗಲೇರಿದೆ.

 24,000 ಕೋ.ರೂ.ಗಳ ಅಸಲು ಹಣವನ್ನು ಮರಳಿಸುವಂತೆ ಸಹಾರಾಕ್ಕೆ ಆದೇಶಿಸಲಾಗಿದ್ದು ,ಅದು ಸುಮಾರು 12,000 ಕೋ.ರೂ.ಗಳನ್ನು ಪಾವತಿಸಿದೆ. ಆದರೆ ಹಲವಾರು ಗಡುವುಗಳು ಕಳೆದುಹೋಗಿದ್ದರೂ ಉಳಿದ ಹಣವನ್ನು ಪಾವತಿಸಲು ಅದಕ್ಕೆ ಸಾಧ್ಯವಾಗಿಲ್ಲ. ತುರ್ತಾಗಿ 5,000 ಕೋ.ರೂ.ಗಳನ್ನು ಪಾವತಿಸುವಂತೆ ಸಹಾರಾದ ಬೆನ್ನು ಬಿದ್ದಿರುವ ಸರ್ವೋಚ್ಚ ನ್ಯಾಯಾಲಯವು ಜೂನ್ ಮಧ್ಯದ ವೇಳೆಗೆ ಅದರ ಅರ್ಧ ಮೊತ್ತವನ್ನು ಪಾವತಿಸಲೇಬೇಕೆಂದು ತಾಕೀತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News