ಆ್ಯಸಿಡ್ ದಾಳಿಯ ಸಂತ್ರಸ್ತೆಯರಿಗೆ ಬದುಕು ರೂಪಿಸಲು ಶಿಕ್ಷಣ ಅಗತ್ಯ: ಆ್ಯಸಿಡ್ ದಾಳಿ ಸಂತ್ರಸ್ತೆ ಡಾ.ಮಹಾಲಕ್ಷ್ಮಿ
ಉಡುಪಿ, ಎ.27: ಆ್ಯಸಿಡ್ ದಾಳಿಯ ಸಂತ್ರಸ್ತ ಮಹಿಳೆಯರನ್ನು ಸಮಾಜ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ನಾಲ್ಕು ಗೋಡೆಗಳ ಮಧ್ಯೆ ತಮ್ಮನ್ನು ತಾವೇ ನಿರ್ಬಂಧಿಸಿಕೊಳ್ಳುತ್ತಿದ್ದಾರೆ. ಇದನ್ನು ಮೆಟ್ಟಿ ನಿಂತು ಬದುಕು ರೂಪಿಸಿಕೊಳ್ಳಲು ಅವರಿಗೆ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಆ್ಯಸಿಡ್ ದಾಳಿಯ ಸಂತ್ರಸ್ತೆ ಹಾಗೂ ಮೈಸೂರು ಮೆಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಮಹಾಲಕ್ಷ್ಮಿ ವೈ.ಎನ್. ಹೇಳಿದ್ದಾರೆ.
ಉಡುಪಿಯ ಬೀಂಗ್ ಸೋಶಿಯಲ್ ಸಂಘಟನೆಯ ವತಿಯಿಂದ ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಹೆಜ್ಜೆ ಗುರುತು’ ಸಾಧಕರ ಯಶೋಗಾಥೆಯಲ್ಲಿ ಅವರು ತಮ್ಮ ಜೀವನ ಅನುಭವವನ್ನು ಹಂಚಿಕೊಂಡರು.
ಆ್ಯಸಿಡ್ ದಾಳಿಗೆ ಯತ್ನಿಸಿದ ಆರೋಪಿಗೆ 5-6 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಮತ್ತು ಆ್ಯಸಿಡ್ ದಾಳಿ ಮಾಡಿದರೆ 10 ವರ್ಷ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಬಗ್ಗೆ 2013ರಲ್ಲಿ ಕಾನೂನಿನಲ್ಲಿ ತಿದ್ದುಪಡಿ ತರಲಾಯಿತು. ಭಾರತದಲ್ಲಿ 2011ರಲ್ಲಿ 83 ಮತ್ತು 2014ರಲ್ಲಿ 309 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾದವು. ಅದರ ನಂತರ ಕೇಂದ್ರ ಸರಕಾರ ಆ್ಯಸಿಡ್ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿತು ಎಂದು ಅವರು ತಿಳಿಸಿದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ 3 ಲಕ್ಷ ರೂ. ಪರಿಹಾರ ಹಾಗೂ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ. ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ 3,000 ರೂ. ಪಿಂಚಣಿ ನೀಡಲಾಗುತ್ತಿದೆ. ಸರಕಾರ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಆದರೆ ಅದು ಎಷ್ಟು ಪ್ರಮಾಣದಲ್ಲಿ ಅನುಷ್ಠಾನ ಆಗುತ್ತಿದೆ ಎಂಬುದನ್ನು ನೋಡಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಇಂತಹ ಮಹಿಳೆಯರ ಜೊತೆ ಕೈಜೋಡಿಸಬೇಕಾಗಿದೆ ಎಂದರು.
ಡಾ.ಮಹಾಲಕ್ಷ್ಮಿಯ ಯಶೋಗಾಥೆ: "ಎಂಬಿಬಿಎಸ್ ಮುಗಿಸಿ ಮೈಸೂರಿನಲ್ಲಿ ಕ್ಲಿನಿಕ್ ಆರಂಭಿಸಿದ ಬಳಿಕ ಕಟ್ಟಡದ ಮಾಲಕ ಚಿಕ್ಕಬಸವಯ್ಯ ಪ್ರತಿದಿನ ನನ್ನ ಕ್ಲಿನಿಕ್‌ಗೆ ಬಂದು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಆ ಕಟ್ಟಡ ತೊರೆದು ಬೇರೆ ಕಟ್ಟಡದಲ್ಲಿ ನನ್ನ ಕ್ಲಿನಿಕ್ ಆರಂಭಿಸಿದೆ. ಅಲ್ಲಿಗೂ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಚಿಕ್ಕಬಸವಯ್ಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದೆ. 2001ರ ಜ.9ರಂದು ಕ್ಲಿನಿಕ್‌ಗೆ ಬಂದ ಆತ ಕೇಸು ವಾಪಾಸ್ ಪಡೆಯುವಂತೆ ಬೆದರಿಕೆ ಹಾಕಿ ಹೋದ. ಜ.11ರಂದು ರಾತ್ರಿ ನಾನು ಕ್ಲಿನಿಕ್ ಬಂದ್ ಮಾಡಿ ಮನೆಗೆ ಹೊರಡುವ ವೇಳೆ ಅಲ್ಲೇ ಎದುರಿನಲ್ಲಿ ನಿಂತಿದ್ದ ಆತ ನನ್ನ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿಯಾದ".
"ಜನಸಂದಣಿಯ ಸ್ಥಳವಾಗಿದ್ದ ಆ ಪ್ರದೇಶದಲ್ಲಿ ಯಾರು ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ನನ್ನ ಕ್ಲಿನಿಕ್‌ಗೆ ಬರುತ್ತಿದ್ದ ಬಾಲಕನೋರ್ವ ನನ್ನನ್ನು ನೋಡಿ ರಿಕ್ಷಾ ತೆಗೆದುಕೊಂಡು ಬಂದು ಮನೆಗೆ ತಲುಪಿಸುವ ಕೆಲಸ ಮಾಡಿದ. ಮನೆಯವರು ನನ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಸುಮಾರು ಒಂದೂ ವರೆ ವರ್ಷಗಳ ಕಾಲ ಚಿಕಿತ್ಸೆ ಪಡೆದೆ. ಈ ಆ್ಯಸಿಡ್ ದಾಳಿಯಿಂದ ನನ್ನ ಎಡ ಕಣ್ಣು ಮತ್ತು ಕಿವಿಯನ್ನು ಕಳೆದುಕೊಂಡೆ. ಆದರೂ ನಾನು ಸಮಾಜಕ್ಕಾಗಿ ಬದುಕ ಬೇಕೆಂಬ ಛಲದೊಂದಿಗೆ 2012ರಲ್ಲಿ ಸರಕಾರಿ ಉದ್ಯೋಗಕ್ಕೆ ಸೇರಿಕೊಂಡೆ. ಈಗ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಪ್ರತಿದಿನ 60-70 ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಈ ವೃತ್ತಿ ನನಗೆ ತುಂಬಾ ತೃಪ್ತಿ ಕೊಟ್ಟಿದೆ" ಎಂದರು.
"ನನ್ನ ಮೇಲೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮೈಸೂರು ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ಐದು ವರ್ಷಗಳ ಕಾಲ ವಿಚಾರಣೆ ನಡೆದು ಸಾಕ್ಷ್ಯ ಕೊರತೆಯಿಂದ ಆರೋಪಿ ದೋಷಮುಕ್ತಿಗೊಂಡನು. ನಾನು ಅದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಅಲ್ಲಿ ಐದು ವರ್ಷಗಳ ವಿಚಾರಣೆ ನಡೆದು ಅಲ್ಲಿ ಆತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಒಂದು ದಶಕಗಳ ಕಾಲ ಕಾನೂನು ಹೋರಾಟ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಿದೆ" ಎಂದು ಡಾ.ಮಹಾಲಕ್ಷ್ಮಿ ತಮ್ಮ ಜೀವನದ ದುರಂತ ಕಥೆಯನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿವಿಯ ಸೆನೆಟ್ ಸದಸ್ಯ ಅಮೃತ್ ಶೆಣೈ, ತ್ರಿಶಾ ಕ್ಲಾಸಸ್‌ನ ಸ್ಥಾಪಕ ಗೋಪಾಲ ಕೃಷ್ಣ ಭಟ್ ಉಪಸ್ಥಿತರಿದ್ದರು. ಬೀಂಗ್ ಸೋಶಿಯಲ್‌ನ ರೂವಾರಿ ಅವಿ ನಾಶ್ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅಪೂರ್ವ ರಾವ್ ಕಾರ್ಯಕ್ರಮ ನಿರೂಪಿಸಿದರು.