ವೈದ್ಯಕೀಯ ವೆಚ್ಚ ಪಾವತಿಸಲು ಸ್ವಯಂ ಘೋಷಣೆ ಸಲ್ಲಿಸಿ ಭವಿಷ್ಯನಿಧಿಯಿಂದ ಹಣ ವಾಪಸ್‌ಗೆ ಅವಕಾಶ

Update: 2017-04-27 15:41 GMT

ಹೊಸದಿಲ್ಲಿ,ಎ.27: ಭವಿಷ್ಯನಿಧಿ ಚಂದಾದಾರರು ಗಂಭೀರ ಕಾಯಿಲೆಗಳಿಗೆ ಗುರಿಯಾಗಿದ್ದರೆ ಆಸ್ಪತ್ರೆ ವೆಚ್ಚಗಳನ್ನು ಪಾವತಿಸಲು ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆಯನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಗೆ ಸಲ್ಲಿಸಿ ಭವಿಷ್ಯನಿಧಿ ಉಳಿತಾಯದ ಹಣವನ್ನು ವಾಪಸ್ ಪಡೆಯಲು ಈಗ ಅವಕಾಶ ಕಲ್ಪಿಸಲಾಗಿದೆ.

 ಈ ಸಂಬಂಧ ಕಾರ್ಮಿಕ ಸಚಿವಾಲಯವು ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಇಂತಹ ಸಂದರ್ಭದಲ್ಲಿ ಚಂದಾದಾರರು ಉದ್ಯೋಗದಾತನ ಒಪ್ಪಿಗೆ ಪಡೆಯುವ ಅಥವಾ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕಾದ ಅಗತ್ಯವನ್ನು ಕೈಬಿಡಲಾಗಿದೆ.

ಭವಿಷ್ಯನಿಧಿ ಚಂದಾದಾರರು ಕನಿಷ್ಠ ಒಂದು ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಥವಾ ಕ್ಷಯ, ಕುಷ್ಟರೋಗ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರೆ ಆರು ತಿಂಗಳ ವೇತನಕ್ಕೆ ಸಮನಾದ ಉಳಿತಾಯದ ಹಣವನ್ನು ವಾಪಸ್ ಪಡೆಯಬಹುದಾಗಿದೆ.

ಅಲ್ಲದೆ ಅಂಗವಿಕಲರು ತಮಗೆ ಅಗತ್ಯ ಉಪಕರಣದ ಖರೀದಿಗಾಗಿ ಭವಿಷ್ಯನಿಧಿ ಉಳಿತಾಯವನ್ನು ವಾಪಸ್ ಪಡೆಯಲು ವೈದ್ಯರ ಪ್ರಮಾಣಪತ್ರ ಸಲ್ಲಿಸಬೇಕಾದ ಅಗತ್ಯವನ್ನೂ ತೆಗೆದುಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News