ತಾಯಿ-ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಿ: ಡಾ.ಜಗದೀಶ್
ಮಂಗಳೂರು, ಎ.27: ಜಿಲ್ಲೆಯಲ್ಲಿ ಉತ್ಕೃಷ್ಟ ಆರೋಗ್ಯ ಸೇವಾ ಸೌಲಭ್ಯ ಹೊಂದಿದ್ದರೂ ತಾಯಿ ಮತ್ತು ಶಿಶು ಮರಣ ಸಂಭವಿಸುತ್ತಿರುವುದು ಖೇದಕರ. ಖಾಸಗಿ, ಸರಕಾರಿ ಎನ್ನದೆ ಎಲ್ಲ ವೈದ್ಯರು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ತಾಯಿ ಮತ್ತು ಶಿಶುಮರಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಜಿಲ್ಲೆಯಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಸಮರ್ಪಕ ಹೆರಿಗೆ ಮತ್ತು ನಂತರದ ಹಂತಗಳ ನಿರ್ವಹಣೆಯ ಬಗ್ಗೆ ಖಾಸಗಿ ಮತ್ತು ಸರಕಾರಿ ವೈದ್ಯರಿಗೆ ನಡೆಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಡೀನ್ ಡಾ. ಜಯಪ್ರಕಾಶ್ ಆಳ್ವ, ತಾಯಿ ಮರಣ ಮತ್ತು ಶಿಶುಮರಣ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಉತ್ತಮ ಹೆಜ್ಜೆಯನ್ನು ಇಟ್ಟಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಅಶೋಕ್ ಎಚ್., ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಹೆರಿಗೆ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಾ ಡಿಕುನ್ಹ, ಯೂನಿಟ್ ಚೀಫ್ ಡಾ. ಸುಜಯ್ ರಾವ್, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಾಜೇಶ್ವರಿದೇವಿ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈಧ್ಯಕೀಯ ಅಧೀಕ್ಷಕಿ ಡಾ. ಸವಿತಾ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಶೋಕ್ ಎಚ್., ಡಾ.ವಿದ್ಯಾಶ್ರೀ, ಡಾ. ಶನ್ನೋನ್, ಡಾ.ಸೌಮ್ಯಾ, ಡಾ. ಚೇತನಾ ಮತ್ತು ಡಾ. ದೀಪಾ ಭಾಗವಹಿಸಿದ್ದರು.
ಡಾ. ಪ್ರಜ್ಞಾ ವಂದಿಸಿದರು. ಡಾ.ಯಜ್ಞಾ ಕಾರ್ಯಕ್ರಮ ನಿರೂಪಿಸಿದರು.